

Agriculture: ರಾಜ್ಯ ಮತ್ತು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವ ಕಾರಣದಿಂದ ಬೆಳೆಗಳು ನಾಶವಾಗಿದ್ದು ರೈತರ ಬದುಕು ಸಂಕಷ್ಟದಲ್ಲಿದೆ ರೈತರ ಬೆಂಬಲಕ್ಕೆ ನಿಲ್ಲಬೇಕಾದ ಸರಕಾರ ಹಾಗೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ರೈತ ಪರ ಕಾರ್ಯವನ್ನು ಮಾಡದೆ ರೈತರ ವಿಷಯದಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ಮಾಜಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಯೂರಿಯಾ ಡಿಎಪಿ ಕೊರತೆ ಉಂಟಾಗಿದ್ದರು ಕೂಡ ಯಾರೊಬ್ಬರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಉದ್ಘಾಟನೆಗೆ ಸೀಮಿತವಾಗಿದ್ದು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಆಗಿದ್ದಾರೆ. ಜಿಲ್ಲಾಧಿಕಾರಿಗಳು ಸಹ ಯಾವುದೇ ರೀತಿಯಲ್ಲಿ ರೈತರ ಸಂಕಷ್ಟಕ್ಕೆ ನೆರವಾಗುವ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದರು.
ಹಾವೇರಿ ಜಿಲ್ಲೆಗೆ 56 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಅವಶ್ಯಕತೆ ಇದ್ದು ಈಗ 55.433 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಜಿಲ್ಲೆಗೆ ಬಂದಿದೆ. 13, ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದ್ದು ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ನಡೆಯುತ್ತಿದೆ. ಅಲ್ಲದೆ ಕಾಳ ಸಂತೇಲಿ ಗೊಬ್ಬರ ಖರೀದಿಸಲು ಲಿಂಕ್ ವ್ಯವಸ್ಥೆ ಬಂದಿದ್ದು ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ರೈತರು ಸಂಕಷ್ಟದಲ್ಲಿದ್ದರು ಅಧಿಕಾರಿಗಳಿಗೆ ಇದು ಸುಗ್ಗಿಯ ಕಾಲದಂತಾಗಿದೆ. ಡಿಎಪಿ ಗೊಬ್ಬರ ಸಹ ನಕಲಿ ಗೊಬ್ಬರವಾಗಿ ಮಾರುಕಟ್ಟೆಗೆ ಬಂದಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರಕಾರ ಅಸ್ತಿತ್ವದಲ್ಲಿದ್ದಾಗ ನಕಲಿ ಮತ್ತು ಕಳಪೆ ಗೊಬ್ಬರಕ್ಕೆ ಅವಕಾಶ ನೀಡದೆ ರೈತರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗಿತ್ತು ಆದರೆ ಈಗ ಕೃಷಿ ಇಲಾಖೆಯ ಜಾಗೃತ ದಳವು ಸಹ ಏನೂ ಕಾರ್ಯನಿರ್ವಹಿಸದೆ ಕಾಳಸಂತೆಯಲ್ಲಿ ನಕಲಿ ಗೊಬ್ಬರದ ಹಾವಳಿ ಹೆಚ್ಚಾಗಿದೆ ಎಂದರು.
ಕಾಂಗ್ರೆಸ್ ಸರಕಾರ ರೈತರಿಗೆ ನೆರವಾಗದೆ ಕೇವಲ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ ಈ ಸರಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟಿದ್ದು ಬಿಟ್ಟರೆ ರೈತರಿಗೆ ಯಾವ ಭಾಗ್ಯವನ್ನು ಕೊಟ್ಟಿಲ್ಲ ಬದಲಾಗಿ ರೈತರಿಗೆ ಕಳಪೆ ಬೀಜದ ಭಾಗ್ಯವನ್ನು ಕೊಟ್ಟಿದ್ದಾರೆ ಆ ಮೂಲಕ ರೈತರು ನಾಶವಾಗುವಂತೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯ ಸರಕಾರ ಕೂಡಲೇ ರೈತರಿಗೆ ಬೆಳೆ ಹಾನಿ ಕುರಿತಾಗಿ ಪರಿಹಾರವನ್ನು ಘೋಷಿಸಬೇಕು, ರೈತರು ಆತ್ಮಸ್ಥೈರ್ಯದಿಂದ ಇರಬೇಕು ನಾವು ನಿಮ್ಮೊಂದಿಗೆ ಇದ್ದೇವೆ. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಮಾಜಿ ಕೃಷಿ ಸಚಿವರು ಋಜ್ಯದ ರೈತರಿಗೆ ಭರವಸೆ ನೀಡಿದ್ದಾರೆ.













