Bengaluru : ‘ಧರ್ಮಸ್ಥಳ ಅಪರಾಧ’ ಪ್ರಕರಣ – ಮುಖ್ಯಮಂತ್ರಿಗಳನ್ನು ಭೇಟಿಯಾಗಿ SIT ರಚನೆಗೆ ಆಗ್ರಹಿಸಿದ ವಕೀಲರ ನಿಯೋಗ !!

Share the Article

Bengaluru : ನಾಡಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ಅಪರಾಧ ಕೃತ್ಯಗಳ ಕುರಿತು ಅನಾಮಿಕ ವ್ಯಕ್ತಿ ಒಬ್ಬರು ನೀಡಿರುವ ದೂರು ಇದೀಗ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ವ್ಯಕ್ತಿ ಕೋರ್ಟಿಗೂ ಹಾಜರಾಗಿ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಸದ್ಯ ಈ ವಿಚಾರ ರಾಜ್ಯದಲ್ಲಿ ಹೊಸ ಕಿಚ್ಚನ್ನು ಎಬ್ಬಿಸಿದೆ. ಈ ಬೆನ್ನಲ್ಲೇ ವಕೀಲರ ನಿಯೋಗ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಆಗ್ರಹಿಸಿದೆ

ಸಿಎಂ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ತನಿಖೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಅತ್ಯಾಚಾರ, ಕೊಲೆ,ಶವಗಳನ್ನು ಹೂತಿಟ್ಟ ಆರೋಪಗಳು ಕೇಳಿಬರುತ್ತಿರುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ತ್ವರಿತ ತನಿಖೆಯನ್ನು ನಡೆಸಬೇಕಾಗಿ,ಆ ಮೂಲಕ ಈ ಎಲ್ಲಾ ಆರೋಪಗಳ ಅಸಲಿಯತ್ತು,ಸತ್ಯಾಸತ್ಯತೆ ಏನು ಎಂಬುದನ್ನು ರಾಜ್ಯದ ಜನರ ಮುಂದಿಡಬೇಕಾಗಿ ಮನವಿ ಮಾಡಿದೆ.

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಸಿ.ಎಸ್. ದ್ವಾರಕಾನಾಥ್ ಅವರು, “ಇವತ್ತು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ, ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದಂತಹ ಸಾಮೂಹಿಕ ಅತ್ಯಾಚಾರ, ಹತ್ಯೆ ಮತ್ತು ಹೂತು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಅಲ್ಲಿ ತನಿಖೆ ನಡೆಯುತ್ತಿದ್ದು, ಒಬ್ಬರು ದೂರು ಕೂಡ ನೀಡಿದ್ದಾರೆ. ಆ ವ್ಯಕ್ತಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಅಲ್ಲದೆ, ಆ ವ್ಯಕ್ತಿ ಹೇಳುವ ಜಾಗದಲ್ಲಿ ಪರಿಶೀಲನೆ ನಡೆಸಬೇಕಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಎಸ್‌ಐಟಿಗೆ ನೀಡಬೇಕು ಎಂದು ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

Comments are closed.