Belthangady: ಧರ್ಮಸ್ಥಳ: ನಿಗೂಢ ಕೊಲೆಗಳ ರಹಸ್ಯ ಬಿಚ್ಚಿಡಲು ಮುಂದಾಗಿದ್ದೇನೆ ಎಂದಿದ್ದ ಅನಾಮಿಕ ವ್ಯಕ್ತಿ ಕೊನೆಗೂ ನ್ಯಾಯಾಲಯಕ್ಕೆ ಹಾಜರು!

Belthangady: ಬೆಳ್ತಂಗಡಿ: ಧರ್ಮಸ್ಥಳ ಸುತ್ತಮುತ್ತ ನಡೆದ ಹತ್ತಾರು ಅತ್ಯಾಚಾರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ಆ ಹೆಣಗಳನ್ನು ತಾನೇ ಹೂತು ಹಾಕಿದ್ದು ಎಂದು ಹೇಳಿದ್ದ ವ್ಯಕ್ತಿ ಇವತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅಂದು ಹೂತು ಹಾಕಿದ ಹೆಣಗಳನ್ನು ಹೊರತೆಗೆದು ತೋರಿಸುತ್ತೇನೆ ಎಂದು ವಕೀಲರ ಮೂಲಕ ಪೊಲೀಸರಿಗೆ ಪತ್ರ ಬರೆದಿದ್ದ ವ್ಯಕ್ತಿ ಇಂದು (ಜುಲೈ 11 ) ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ದಶಕಗಳ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ತಾನು ಅನ್ಯರ ಒತ್ತಡಕ್ಕೊಳಗಾಗಿ ಕೊಲೆಯಾದ ಹೆಣಗಳನ್ನು ಹೂತಿದ್ದಾಗಿ ಹೇಳಿಕೊಂಡಿದ್ದಾನೆ. ಇದೀಗ ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಸತ್ಯ ಬಿಚ್ಚಿಡಲು ಸಿದ್ಧನಿರುವುದಾಗಿ ತಿಳಿಸಿದ್ದರು. ತಾನು ಹೇಳಿದಂತೆಯೆ ಜುಲೈ 4ರಂದು ದೂರನ್ನೂ ದಾಖಲಿಸಿದ್ದರು. ಇದೀಗ ಈ ಅನಾಮಧೇಯ ವ್ಯಕ್ತಿ ತನಿಖೆಗೆ ಸಿದ್ಧ ಎಂದು ಹೇಳಿಕೊಂಡಿದ್ದು, ಅವರು ಇಂದು ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ಮುಂದೆ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆಯೇ ದೂರು ನೀಡಿದ್ದರೂ ಅನಾಮಧೇಯ ವ್ಯಕ್ತಿ ಖುದ್ದಾಗಿ ಹಾಜರಾಗಿರಲಿಲ್ಲ. ಜೊತೆಗೆ, ನಿನ್ನೆ ಗೃಹ ಸಚಿವ ಪರಮೇಶ್ವರವರು, ಆರೋಪಿ ಖುದ್ದಾಗಿ ಬಂದು ದೂರು ನೀಡಿಲ್ಲ, ವಕೀಲರ ಮೂಲಕ ದೂರನ್ನಷ್ಟೆ ಕೊಟ್ಟದ್ದು ಎಂದು ಹೇಳಿಕೆ ನೀಡಿದ್ದರು. ಆದ್ದರಿಂದ ಕೊಲೆ ಅತ್ಯಾಚಾರದ ತನಿಖೆ ಸಮಗ್ರವಾಗಿ ತ್ವರಿತವಾಗಿ ಆಗಬೇಕೆಂದು ಬಯಸುತ್ತಿದ್ದ ಜನಸಾಮಾನ್ಯರಿಗೆ ಕಸಿವಿಸಿ ಉಂಟಾಗಿತ್ತು.
ಇದೀಗ ಒಂದು ಮಹತ್ವದ ಬೆಳವಣಿಗೆ ನಡೆದಿದ್ದು ಅನಾಮಧೇಯ ವ್ಯಕ್ತಿ ಖುದ್ದಾಗಿ ಬಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅನಾಮಧೇಯ ವ್ಯಕ್ತಿ ಮುಖಕ್ಕೆ ಪೂರ್ತಿ ಮಾಸ್ಕ್ ಹಾಕಿಕೊಂಡು ಬಂದಿದ್ದು ಆತನ ಕೈಯಲ್ಲಿ ದೊಡ್ಡ ಬ್ಯಾಗ್ ಇತ್ತು. ಆ ಬ್ಯಾಗಿನಲ್ಲಿ ಏನಿತ್ತು? ಸಾಕ್ಷಿ ಸಂಬಂಧಿತ ವಸ್ತು ವಿಷಯಗಳು ಇದ್ದಾವೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Comments are closed.