Basavaraja Rayareddy: ನಾನು ಮಂತ್ರಿ ಆದರೆ ಪುರುಷರಿಗೂ ಉಚಿತ ಬಸ್ ಪ್ರಯಾಣ – ಸಿಎಂ ಆರ್ಥಿಕ ಸಲಹೆಗಾರ ಘೋಷಣೆ

Share the Article

 

Basavaraja Rayareddy : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ತಾನು ಭರವಸೆ ನೀಡಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆಯನ್ನು ಜಾರಿಗೊಳಿಸಿತು. ಈ ಯೋಜನೆ ಕುರಿತು ರಾಜ್ಯದಲ್ಲಿ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಅಲ್ಲದೆ ಇದು ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಆದರೂ ಇದೀಗ ಪುರುಷರಿಗೂ ಕೂಡ ಉಚಿತ ಪ್ರಯಾಣ ಘೋಷಿಸಬೇಕು ಎಂಬ ಕೂಗುಗಳು ಕೇಳುತ್ತಿವೆ. ಇದರ ನಡುವೆಯೇ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ನಾನು ಮಂತ್ರಿ ಆದರೆ ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

 

ಕೊಪ್ಪಳದ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಬಾಲಕಿಯರ ನೂತನ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ, ನಾನು ಸಚಿವನಾದರೆ ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡುತ್ತೇನೆ. ನನ್ನನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ನೋಡೋಣ ಎಂದು ಹೇಳಿದರು.

 

ಅಲ್ಲದೆ ನನ್ನನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದೊಮ್ಮೆ ನನ್ನನ್ನು ಹಣಕಾಸು ಸಚಿವನಾಗಿ ಮಾಡಿದರೆ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೇನೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾದರೆ, ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡುತ್ತೇವೆ. ನಾನು ಗ್ಯಾರಂಟಿಗೆ ವಿರೋಧ ಮಾಡಲ್ಲ. ನಾನು ಜನರ ಮುಂದೆ ತಮಾಷೆ ಆಗಿ ಮಾತನಾಡಿದ್ದನ್ನೆಲ್ಲ ಮಾಧ್ಯಮದವರು ವರದಿ ಮಾಡುತ್ತಾರೆ. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಎಲ್ಲ ಅಭಿವೃದ್ಧಿ ಕೆಲಸ ಆಗುತ್ತಿವೆ. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಹಿಂದಿನ‌ ಸರ್ಕಾರ ಸುಮಾರು 2.5 ಲಕ್ಷ ಕೋಟಿ ರೂ. ಬಿಲ್ ಬಾಕಿ ಉಳಿಸಿತ್ತು. ಈ ಭಾರ ನಮ್ಮ ತಲೆ‌ ಮೇಲೆ ಬಿಜೆಪಿ ಅವರು ಹಾಕಿದ್ದಾರೆ. ಇದರಿಂದ ಒಂದಷ್ಟು ಸಮಸ್ಯೆ ಆಗಿದೆ ಅಷ್ಟೇ ಎಂದರು.

Comments are closed.