Fake Milk: ನೀವು ಕುಡಿಯುವ ಹಾಲು ಅಮೃತವೇ ಅಥವಾ ವಿಷವೇ? – ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸುವ ಜಾಲ ಪತ್ತೆ

Fake Milk: ಹಾಲು ಅಮೃತ. ಹಾಲು ಕುಡಿದರೆ ಸರ್ವ ರೋಗವೂ ಮಾಯವಾಗುತ್ತೆ. ಶಕ್ತಿ ಬರುತ್ತೆ. ಅದರಲ್ಲೂ ಮಕ್ಕಳಿಗೆ ಹಾಲು ಇಲ್ಲದೆ ಬೆಳೆಸೋದು ಕಷ್ಟ. ಅಂಥ ಹಾಲು ಇದೀಗ ವಿಷವಾಗುತ್ತಿದೆ ಅಂದ್ರೆ ನಂಬುತ್ತಿರಾ? ನಕಲಿ ಹಾಲಿನ ಪುಡಿ ಮತ್ತು ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸುವ ದಂಧೆ ಇದೀಗ ಎಲ್ಲೆಡೆ ಬೆಳಕಿಗೆ ಬರುತ್ತಿದೆ. ಅದರಲ್ಲೂ ಗಡಿಭಾಗದ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಹೊಇರ ರಾಜ್ಯಗಳಿಗೆ ಮಾರುವುದು ಅಥವಾ ಹಾಲಿನ ಡೇರಿಗಳಿಗೆ ಸರಬರಾಜು ಮಾಡುವುದನ್ನು ಕಸುಬು ಮಾಡಿಕೊಂಡಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಸವಟೂರು ಗ್ರಾಮದಲ್ಲಿ ನರೇಶ್‌ರೆಡ್ಡಿ ಎಂಬುವವರು ನಕಲಿ ಹಾಲು ತಯಾರಿಸಿ ಮಾರಾಟ ಮಾಡುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ. ನರೇಶ್‌ರೆಡ್ಡಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ 400-500 ಲೀಟರ್ ಹಾಲನ್ನು ಆಂಧ್ರಪ್ರದೇಶದ ತಿರುಮಲ ಡೇರಿಗೆ ಸರಬರಾಜು ಮಾಡುತ್ತಿದ್ದರು. ಸಂಶಯಗೊಂಡ ಅಧಿಕಾರಿಗಳು, ತಪಾಸಣೆ ನಡೆಸಿದಾಗ ಅವರು ಕಳೆದ 7-8 ತಿಂಗಳಿಂದ ರಾಸಾಯನಿಕ ಬಳಸಿ ನಕಲಿ ಹಾಲನ್ನು ತಯಾರಿಸಿ ಡೇರಿಗೆ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕಂಡು ಹಿಡಿದಿದ್ದು ಹೇಗೆ?
ಡೇರಿಯಲ್ಲಿ ಹಾಲು ಖರೀದಿಸುವಾಗ ಹಾಲಿನಲ್ಲಿರೋ ಕೊಬ್ಬಿನಾಂಶ ಮತ್ತು ನೀರಿನ ಅಂಶವನ್ನು ಪರೀಕ್ಷೆ ಮಾಡಲಾಗುತ್ತದೆ. ಆರೋಪಿ ನರೇಶ್ ರೆಡ್ಡಿ ಹಾಕುತ್ತಿದ್ದ ಹಾಲಿನ ಕೊಬ್ಬಿನಾಂಶ ಮತ್ತು ನೀರಿನಾಂಶ ಪರೀಕ್ಷೆ ಮಾಡಿದಾಗ ಅಸಲಿ ಹಾಲಿಗಿಂತಲೂ ಹೆಚ್ಚಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಆ ಹಾಲನ್ನು ಪರೀಕ್ಷೆ ಮಾಡಿದಾಗ ಮಾರಕ ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸಿ ಡೇರಿಗೆ ಕೊಡುತ್ತಿರುವುದು ದೃಢಪಟ್ಟಿತ್ತು. ಆರೋಪಿ ನರೇಶ್ ನಕಲಿ ಹಾಲು ತಯಾರಿಸಲು ಬಳಕೆ ಮಾಡುತ್ತಿದ್ದ ಪುಡಿ ತಿನ್ನಲು ಯೋಗ್ಯವಲ್ಲ ಎಂದು ಪ್ರಯೋಗಾಲಯದಿಂದ ವರದಿ ಬಂದಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನಕಲಿ ಹಾಲಿನ ಪತ್ತೆ ಹೇಗೆ ?
ನಾವು ಬಳಸುವ ಹಾಲು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಮನೆಯಲ್ಲೇ ನಾವು ಪರೀಕ್ಷೆ ಮಾಡಬಹುದು. ಹಾಲನ್ನು ಒಂದು ಬಾಟಲಿಗೆ ಹಾಕಿ ಸ್ವಲ್ಪ ಸಮಯ ಅಲ್ಲಾಡಿಸಿ ಕಡಿಮೆ ನೊರೆ ಬಂದು ಬೇಗ ನೊರೆ ಆವಿಯಾದರೆ ಅದು ಅಸಲಿ ಹಾಲಾಗಿರುತ್ತದೆ. ಇನ್ನು ನಕಲಿ ಎಂದು ತಿಳಿಯಲು ಒಂದು ಸ್ಟೀಲ್ ತಟ್ಟೆಯನ್ನು ಓರೆಯಾಗಿ ಹಿಡಿದು ಅದಕ್ಕೆ ಒಂದು ಹಾನಿ ಹಾಲು ಜಾರುವಂತೆ ಹಾಕಿ. ಅದು ನಿಧಾನವಾಗಿ ಹರಿದಂತೆ ಅದು ಹಾಲಿನ ಕುರುಹು ಬಿಡುತ್ತದೆ. ಆದರೆ, ನಕಲಿ ಹಾಲು ವೇಗವಾಗಿ ಹರಿದು ಕುರುಹು ಬಿಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: Mangaluru: ಮಂಗಳೂರು ಮಗು ಮಾರಾಟ ಪ್ರಕರಣ: ಮೂವರಿಗೆ 10 ವರ್ಷ ಜೈಲು
Comments are closed.