Khadak Rotti: ಪ್ರಧಾನಿ ಮೋದಿ ‘ಮನ್ ಕಿ ಬಾತ್’ ನಲ್ಲಿ ಉತ್ತರ ಕರ್ನಾಟಕದ ‘ಖಡಕ್ ರೊಟ್ಟಿ’ ಸದ್ದು – ಕೆಲವೇ ಗಂಟೆಗಳಲ್ಲಿ ಹೆಚ್ಚಿದ ಆರ್ಡರ್

Khadak Rotti: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕಲಬುರಗಿ ಖಡಕ್ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದ್ದು, ಇದೀಗ ದೇಶಾದ್ಯಂತ ಈ ಖಡಕ್ ರೊಟ್ಟಿ ಸದ್ದು ಮಾಡುತ್ತಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಭಾಷಣದ ವೇಳೆ ಕರ್ನಾಟಕದ ಖಡಕ್ ರೊಟ್ಟಿ ಹಾಗೂ ಅದರಲ್ಲೂ ವಿಶೇಷವಾಗಿ ಕಲಬುರಗಿಯ ಮಹಿಳೆಯರು ತಯಾರಿಸುವ ರೊಟ್ಟಿಯನ್ನು ಹಾಡಿ ಹೊಗಳಿದ್ದಾರೆ. ಮೋದಿಯವರು ಹೀಗೆ ಖಡಕ್ ರೊಟ್ಟಿಯನ್ನು ಪ್ರಸ್ತಾಪಿಸಿ ಕೆಲವೇ ಗಂಟೆಗಳು ಕಳೆಯುತ್ತಿದ್ದಂತೆ ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘವು ಅಮೆಜಾನ್ ಮೂಲಕ 60 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡಿತು.
ಮನ್ ಕಿ ಬಾತ್ ನಲ್ಲಿ ಮೋದಿ ಹೇಳಿದ್ದೇನು?
‘ಸ್ನೇಹಿತರೇ, ಕರ್ನಾಟಕದ ಕಲಬುರ್ಗಿಯ ಮಹಿಳೆಯರ ಸಾಧನೆ ಕೂಡಾ ಬಹಳ ಉತ್ತಮವಾಗಿದೆ. ಇವರು ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ಮಾಡಿದ್ದಾರೆ. ಅವರು ರಚಿಸಿರುವ ಸಹಕಾರಿ ಸಂಘದಲ್ಲಿ ಪ್ರತಿದಿನ 3 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ. ಈ ರೊಟ್ಟಿಗಳ ಸುವಾಸನೆ ಈಗ ಕೇವಲ ಹಳ್ಳಿಗಳಿಗೆ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. ಆನ್‌ಲೈನ್ ಆಹಾರ ವೇದಿಕೆಗಳ ಮೂಲಕ (Online Food Platforms) ಮೂಲಕ ಬೇಡಿಕೆಗಳು ಬರುತ್ತಿವೆ. ಕಲಬುರಗಿ ರೊಟ್ಟಿ ಈಗ ದೊಡ್ಡ ನಗರಗಳ ಅಡುಗೆ ಮನೆಯವರೆಗೂ ತಲುಪುತ್ತಿದೆ. ಇದು ಈ ಮಹಿಳೆಯರ ಮೇಲೆ ಉತ್ತಮ ಪರಿಣಾಮ ಬೀರಿದ್ದು, ಇವರ ವರಮಾನ ಕೂಡಾ ಹೆಚ್ಚಾಗುತ್ತಿದೆ’ ಎಂದು ಕೊಂಡಾಡಿದರು.
‘ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ‘ಕಲಬುರಗಿ ಜೋಳದ ರೊಟ್ಟಿ’ ಕುರಿತು ಪ್ರಸ್ತಾಪಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ರೊಟ್ಟಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.
Comments are closed.