Shahshi Taroor: “ಹಾರಲು ಅನುಮತಿ ಕೇಳಬೇಡಿ, ರೆಕ್ಕೆ ನಿಮ್ಮವು, ಆಕಾಶ ಯಾರದ್ದೂ ಅಲ್ಲ”- ತರೂರ್ ಹೇಳಿಕೆಯ ಅರ್ಥ ಇದೀಗ ಬಹಿರಂಗ!

Shahshi Taroor: ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕಾಗಿ ಪಕ್ಷದ ನಾಯಕ ಶಶಿ ತರೂರ್ ರನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಟೀಕಿಸಿ, “ನಮಗೆ ಮೊದಲು ದೇಶ, ಆದರೆ ಕೆಲವು ಜನರಿಗೆ, ಮೊದಲು ಮೋದಿ” ಎಂದು ಟೀಕಿಸಿದ್ದರು. ಈ ಬೆಳವಣಿಗೆ ಪಕ್ಷದಲ್ಲೇ ತರೂರ್‌ಗೆ ಅತ್ಯಂತ ಬಲವಾದ ತಿರಸ್ಕಾರವಾಗಿದೆ ಎಂದು ವಿಶ್ಲೇಷಿಸಲಾಗಿದ್ದು ಅದು ಕಾಂಗ್ರೆಸ್ ಪಕ್ಷದ ಒಳಗೆ ಜಗಳಕ್ಕೂ ಕಾರಣವಾಗಿತ್ತು.

ಶಶಿ ತರೂರ್ ಪೋಸ್ಟ್ ಮೂಲಕ ತಮ್ಮದೇ ಪಕ್ಷದ ಸಹೋದ್ಯೋಗಿಗಳ ವಾಗ್ದಾಳಿಗೆ ಉತ್ತರ ಕೊಟ್ಟಿದ್ದಾರೆ. “ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು. ಆಕಾಶ ಯಾರಿಗೂ ಸೇರಿಲ್ಲ” ಎಂದು ಪಕ್ಷಿಯ ಛಾಯಾಚಿತ್ರದೊಂದಿಗೆ ಸಂದೇಶವನ್ನು ಶಶಿ ತರೂರ್ ಪ್ರಕಟಿಸಿದುದರ ಅರ್ಥ ಏನು ಎನ್ನುವ ಪ್ರಶ್ನೆ ಎದ್ದಿತ್ತು. ತರೂರ್ ಕಾಂಗ್ರೆಸ್ ನಿಂದ ದೂರ, ಬಿಜೆಪಿಗೆ ಹತ್ತಿರ ಹೋಗುತ್ತಿದ್ದಾರೆ ಎಂದು ತಪ್ಪಾಗಿ ಅರ್ಥ ಮಾಡಲಾಗಿತ್ತು. ನಿಜಕ್ಕೂ ಅದರ ಗೂಢಾರ್ಥ ಅದಲ್ಲ. ಎಲ್ಲರೂ ತರೂರ್ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು.
ಇದೆಲ್ಲಾ ಶುರುವಾದದ್ದು ಆಪರೇಷನ್ ಸಿಂಧೂರ್ ನಂತರ ತರೂರ್ ಬರೆದ ಲೇಖನ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿ, ಪ್ರಧಾನಿ ಮೋದಿಯವರ ಶಕ್ತಿ, ಚೈತನ್ಯ ಮತ್ತು ತೊಡಗಿಸಿಕೊಳ್ಳುವ ಇಚ್ಛಾಶಕ್ತಿ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ “ಪ್ರಮುಖ ಆಸ್ತಿ”ಯಾಗಿ ಉಳಿದಿದೆ, ಹೆಚ್ಚಿನ ಬೆಂಬಲಕ್ಕೆ ಅರ್ಹವಾಗಿದೆ” ಎಂದು ಬರೆದದ್ದು.
ಅಷ್ಟಕ್ಕೂ ತರೂರ್ ಹೇಳಿದ ರೆಕ್ಕೆಗಳು ನಿಮ್ಮವು ಮತ್ತು ಆಕಾಶ ಯಾರಿಗೂ ಸೇರಿಲ್ಲ ಅರ್ಥ ಏನೆಂದು ನೋಡಿದರೆ. ಕಾಂಗ್ರೆಸ್ ಕೊಂಚ ನಾಚಿಕೆಪಟ್ಟು ಕೊಳ್ಳಬೇಕಾದ ಅಗತ್ಯ ಇದೆ. ಯಾರಾದ್ರೂ ಸಾಧಿಸಿದಾಗ ಆತನ ವಿಜಯವನ್ನು ನಾವು ಸಂಭ್ರಮವಾಗಿ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದರೆ, ಸುಮ್ಮನಾಗಬೇಕು. ಏನೇ ಮಾಡಿದರೂ ಪ್ರಧಾನಿ ಮೋದಿಯ ಚರಿಸ್ಮಾ ಕಮ್ಮಿ ಮಾಡಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ಈ ಸಂದರ್ಭ ಕಾದು ಸೂಕ್ತ ಸಂದರ್ಭಕ್ಕಾಗಿ ಕೂರೋದು ಸೂಕ್ತ ನಡವಳಿಕೆ. ಅದು ಬಿಟ್ಟು. ಮೈ ಪರಚಿಕೊಂಡರೆ ಏನು ಮಾಡಲಾದೀತು?
ಒಬ್ಬರ ಒಳ್ಳೆಯ ಕಾರ್ಯವನ್ನು ಹೊಗಳಿದ ತಕ್ಷಣ, ಜೀವಮಾನದ ಕಾಂಗ್ರೆಸ್ಸಿಗನೊಬ್ಬ ಏಕಾಏಕಿ ಪಕ್ಷದ ಬೇಲಿ ನೆಗೆದು ಇನ್ನೊಂದು ಮನೆಯ ಜಗಲಿಯ ಮೇಲೆ ಹೋಗಿ ಪವಡಿಸುವುದಿಲ್ಲ. ತರೂರ್ ಅವರ ಹೇಳಿಕೆಯನ್ನು ಸಣ್ಣಗೆ ಖಂಡಿಸಿ ನಿರ್ಲಕ್ಷಿಸಿ ಬಿಡಬೇಕಿತ್ತು. ಮೋದಿಯವರ ಯೋಜನೆಯಂತೆ ತರೂರ್ ತಂಡ ವಿದೇಶಕ್ಕೆ ತಂಡ ಕಟ್ಟಿಕೊಂಡು ಹೋದುದು ದೇಶಕ್ಕಾಗಿ, ದೇಶದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಎಂದು ಕಾಂಗ್ರೆಸ್ ಯಾವತ್ತಿಗೂ ಅಂದುಕೊಳ್ಳಲೇ ಇಲ್ಲ. ಮೋದಿ ಅವರನ್ನು ದೂರಲೇಬೇಕೆನ್ನುವ ಹಟಕ್ಕೆ ಕುಳಿತ ಕಾಂಗ್ರೆಸ್ ತರೂರ್ ಅನ್ನು ಬಲವಾಗಿ ಟೀಕಿಸಿತು.
“ಸುಮ್ನೆ ಉರ್ಕೊಬೇಡಿ, ತಾಕತ್ತಿದ್ದರೆ ಆಕಾಶಕ್ಕೆ ಹಾರಿ, ಆಕಾಶ ಯಾರದ್ದೂ ಅಲ್ಲ. ಅಲ್ಲಿ ಅನಂತ ಅವಕಾಶಗಳಿವೆ. ಆಕಾಶ ಅವಕಾಶಗಳ ಬೃಹತ್ ಆಟದ ಮೈದಾನ. ಕಸುವು ಜತೆಗೆ ಕನಸು ಬೆರೆಸಿ ರೆಕ್ಕೆ ಬೀಸಿದರೆ ನೀವೂ (ಕಾಂಗ್ರೆಸ್ ಪಕ್ಷ – ಅದರಲ್ಲಿ ತರೂರ್ ತಮ್ಮನ್ನೂ ಸೇರಿಸಿಕೊಂಡು) ಸ್ಪರ್ಧೆ ಗೆಲ್ಲಬಹುದು ಅನ್ನೋದನ್ನು ಕಲಾತ್ಮಕವಾಗಿ ತರೂರ್ ಹೇಳಿದ್ದರು. ಜಡ ಸ್ಪಂದನೆಗಳೇ ಇಲ್ಲದ ಮಲ್ಲಿಕಾರ್ಜುನ ಖರ್ಗೆ ಅಂತಹ ನಾಯಕರುಗಳಿಗೆ ಅದು ಎಲ್ಲಿ ಅರ್ಥವಾಗುತ್ತದೆ?!
ಒಟ್ಟಾರೆಯಾಗಿ ಹೇಳಬೇಕೆಂದರೆ ಮೋದಿ ಅವರನ್ನು ಸುಮ್ಮನೆ ದೂರುವುದು, ವಿನಾ ಕಾರಣ ಟೀಕಿಸಿ ಸಮಯ ವ್ಯರ್ಥ ಮಾಡುವುದು ಬಿಟ್ಟು ಅವರ ವಿರುದ್ಧ ಸೈದ್ಧಾಂತಿಕವಾಗಿ ಸ್ಪರ್ಧಿಸೋಣ – ಅನ್ನೋದನ್ನು ಶಶಿ ಸೂಚಿಸಿದ್ದಾರೆ. ಸ್ಪರ್ಧಿಸಲು ಎಲ್ಲರಿಗೂ ಅವಕಾಶಗಳು ಇವೆಯಲ್ಲವೆ? ನಾವ್ಯಾಕೆ ಸೋಲುತ್ತಿದ್ದೇವೆ ಅನ್ನೋದನ್ನು ಯೋಚಿಸಿ, ಕಾರ್ಯತಂತ್ರ ರೂಪಿಸಿ ಮುಂದೆ ನಡೆಯಬೇಕು ಅನ್ನುವ ಅರ್ಥ ತರೂರ್ ರವರ ಹೇಳಿಕೆಯದ್ದು. ದುರದೃಷ್ಟವಶಾತ್, ಯಾರಿಗೂ ಅದು ಅರ್ಥ ಆದಂತಿಲ್ಲ. ಕಾಂಗ್ರೇಸ್ ಪಕ್ಷಕ್ಕೆ ಅದು ಯಾವತ್ತೂ ಅರ್ಥ ಆಗಲ್ಲ. ಅರ್ಥ ಆದ ದಿನ ಅದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುತ್ತದೆ!!
Comments are closed.