ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ: ಸರ್ವೇ ಹಾಗೂ ದಲ್ಲಾಳಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ದಳ

Share the Article

Mangaluru: ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸುವುದಕ್ಕೆ ಲಂಚ ಪಡೆಯುವ ವೇಳೆ ಸಿಕ್ಕಿ ಬಿದ್ದ ಸರ್ವೆಯರ್ ಮತ್ತು ದಲ್ಲಾಳಿ.

ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು 2025ರ ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸರ್ವೆಯರ್ ನಂದೀಶ್ 2025ರ ಎಪ್ರಿಲ್‌ನಲ್ಲಿ ಸರ್ವೆ ನಡೆಸಿ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. 6,500 ರೂ.ವನ್ನು ಸರ್ವೆಯರ್ ಸ್ವತಃ ಸ್ವೀಕರಿಸಿದ್ದಲ್ಲದೆ, 20,000 ರೂ.ವನ್ನು ದಳ್ಳಾಲಿ ಬಿಜೈಯ ದಿವಾಕರ್ ಮೂಲಕ ಪಡೆದುಕೊಂಡಿದ್ದರು.

ನಂತರ ಸರ್ವೆಯರ್ ನಂದೀಶ್ ಎರಡೂ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂ. ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸಾಕ್ಷಿಯೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಸರ್ವೆಯರ್ ನಂದೀಶ್ ಇದೇ ತಿಂಗಳಲ್ಲಿ ಮತ್ತೆ 15,000 ರೂ.ವನ್ನು ದಿವಾಕರ್ ಮೂಲಕ ಪಡೆದು ಕೊಂಡಿದ್ದರು. ಹೀಗೆ ಒಟ್ಟು 41,500 ರೂ.ವನ್ನು ಪಡೆದುಕೊಂಡು ಬುಧವಾರ ಮತ್ತೆ 2,000 ರೂ. ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಮತ್ತು ಚಂದ್ರಶೇಖರ್ ಕೆ.ಎನ್. ಭಾಗಿಯಾಗಿದ್ದರು.

Comments are closed.