SSLC ಶೇ 60 ಕ್ಕಿಂತ ಕಡಿಮೆ ಫಲಿತಾಂಶದ ಅನುದಾನಿತ ಶಾಲೆಗಳ ವಿರುದ್ಧ ಸರಕಾರ ಕಠಿಣ ಕ್ರಮ; ಏನೆಲ್ಲಾ? ಇಲ್ಲಿದೆ ಲಿಸ್ಟ್

Karnataka Govt: 2024-25 ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಹಲವೆಡೆ ಉತ್ತೀರ್ಣಕ್ಕೆ ಸಂಬಂಧಪಟ್ಟಂತೆ ಶೇಕಡವಾರು ಕಡಿಮೆ ದಾಖಲಾಗಿದೆ. ಈ ಕಾರಣದಿಂದ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ, ಶಿಕ್ಷಕರು, ಶಾಲಾ ಆಡಳಿತದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ಸರ್ಕಾರದ ಇಡಿ 14 ಎಸ್‌ಇಪಿ 2017 ಆದೇಶ ಆಧಾರದಲ್ಲಿ ಈ ಕೆಳಗಿನ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ:
ವಿಷಯ ಶಿಕ್ಷಕರ ಬಡ್ತಿ ತಡೆ – ಶೇ.60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳಲ್ಲಿ ಬಡ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುವುದು.
ವೇತನ ಅನುದಾನ ತಡೆ – ಮೂರು ವರ್ಷ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ಶಿಕ್ಷಕರ ವೇತನ ಅನುದಾನವನ್ನೂ ತಡೆಯಲಾಗುತ್ತದೆ.
ಶಾಲೆಗಳ ವೇತನ ಅನುದಾನ ರದ್ದು – ಐದು ವರ್ಷಗಳ ಕಾಲ ಶೇ.50ಕ್ಕಿಂತ ಕಡಿಮೆ ಉತ್ತೀರ್ಣ ಶೇಕಡಾವಾರು ನೀಡಿದ ಶಾಲೆಗಳಿಗೆ ನೀಡುವ ವೇತನ ಅನುದಾನವನ್ನೂ ಹಿಂಪಡೆಯಲಾಗುವುದು.
ಅರ್ಹತೆ ಮೌಲ್ಯಮಾಪನ – ಹೊಸ ನೇಮಕಾತಿಗೆ ಅರ್ಹರಾಗುವ ಶಿಕ್ಷಕರಿಗೂ ಫಲಿತಾಂಶ ಆಧಾರಿತ ಮೌಲ್ಯಮಾಪನ ಮಾಡಲಾಗುತ್ತದೆ.
ಶಾಲಾ ಮುಖ್ಯಸ್ಥರಿಗೆ ನೋಟಿಸ್ ಜಾರಿ: ಶೇ.60ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲಾ ಮುಖ್ಯಸ್ಥರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅಡಿಯಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಈ ನೋಟಿಸ್‌ಗೆ 7 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಸಮರ್ಪಕ ಸ್ಪಷ್ಟನೆ ನೀಡದಿದ್ದರೆ ಮುಂದಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ಸ್ವತಃ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಅವರು ನೊಟೀಸ್ ನೀಡಿದ್ದಾರೆ.
ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಲು ಸೂಚನೆ: ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಕ್ರಮ ತೆಗೆದುಕೊಂಡ ಬಗ್ಗೆ ಆಯುಕ್ತರಿಗೆ ವರದಿ ನೀಡಬೇಕೆಂದು ನಿರ್ದೇಶಿಸಲಾಗಿದೆ. ಈ ಮೂಲಕ ರಾಜ್ಯದ ಶೈಕ್ಷಣಿಕ ಮಟ್ಟದ ಉನ್ನತಿಗೆ ಹೊಸ ಬಾಗಿಲು ತೆರೆದು, ಗಣನೀಯ ಫಲಿತಾಂಶ ಸಾಧಿಸುವತ್ತ ಸರ್ಕಾರ ನಿರಂತರ ಪ್ರಯತ್ನಶೀಲವಾಗಿದೆ.
Comments are closed.