Hasana: ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ಹಲವೆಡೆ ಭೂಕುಸಿತ!

Hasana: ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಭೂಕುಸಿತ ಸೃಷ್ಟಿಯಾಗಿದೆ.

ಹಲವೆಡೆ ಮರಗಳು ಉರುಳಿ ಬಿದ್ದು ಆತಂಕ ಸೃಷ್ಟಿಯಾಗಿದ್ದರೆ, ನಿರಂತರ ಮಳೆಗೆ ಎಲ್ಲೆಂದರಲ್ಲಿ ಕುಸಿಯುತ್ತಿರುವ ಗುಡ್ಡದ ಸಾಲುಗಳು ವಾಹನ ಸವಾರರಿಗೆ ಆತಂಕ್ಕೆ ಮೂಡಿಸಿದೆ. ರಾಶಿ ರಾಶಿಯಾಗಿ ಕೊಚ್ಚಿ ಬರುತ್ತಿರುವ ಮಣ್ಣು ಪ್ರಯಾಣಕ್ಕೆ ಅಡ್ಡಿಯಾಗಿದೆ ಮತ್ತೆ ಮಳೆ ಹೆಚ್ಚಾದರೆ ಮಂಗಳೂರು ಹಾಗೂ ಬೆಂಗಳೂರು ನಡುವಣ ಪ್ರಯಾಣಕ್ಕೆ ಅಡಚಣೆಯಾಗಲಿದೆ.
20 ದಿನಗಳ ಹಿಂದೆ ಶಿರಾಡಿ ಘಾಟ್ ಮಾರನಹಳ್ಳಿ ಸಮೀಪ ಹೆಗ್ಗದ್ದೆ ಗ್ರಾಮದಲ್ಲಿ ಸಣ್ಣ ಪ್ರಮಾಣದ ಭೂ ಕುಸಿತ ಸಂಭವಿಸಿದ್ದು ಅದೇ ಸ್ಥಳ ಈಗ ಮತ್ತೆ ದೊಡ್ಡ ಅವಾಂತರದ ಮುನ್ಸೂಚನೆ ನೀಡುತ್ತಿದೆ. ನೂರಾರು ಅಡಿ ಎತ್ತರದ ಗುಡ್ಡದಿಂದ ಹಂತ ಹಂತವಾಗಿ ಮಣ್ಣು ಹಾಗೂ ಮರಗಳು ಕುಸಿಯುತ್ತಿದ್ದು ಮಳೆಯ ನಡುವೆ ಜನರು ನೋಡುತ್ತ ನಿಂತಿರುವಾಗಲೇ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ, ಅದೃಷ್ಟವಶಾತ್ ವಾಹನಗಳು ಮತ್ತೊಂದು ಪಥದಲ್ಲಿ ಚಲಿಸುತ್ತಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ದೋಣಿಗಲ್ ಬಳಿ ಬೃಹದಾಕಾರದ ಮರ ರಸ್ತೆಗೆ ಉರುಳಿಬಿದ್ದು ಸಂಚಾರಕ್ಕೆ ಸಂಕಷ್ಟ ಎದುರಾಗಿದ್ದರೆ, ಕಪ್ಪಳ್ಳಿ ಬಳಿ ಭಾರೀ ಪ್ರಮಾಣದ ಮಣ್ಣಿನ ರಾಶಿ ರಸ್ತೆಯನ್ನು ಆವರಿಸಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ದೊಡ್ಡತಪ್ಪು ಬಳಿ ಮತ್ತೊಂದು ಸ್ಥಳದಲ್ಲಿ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಕುಸಿಯುತ್ತಿದ್ದು ಅಪಾರ ಪ್ರಮಾಣದ ಕಾಫಿ ತೋಟವನ್ನೇ ಆಪೋಶನ ತೆಗೆದುಕೊಂಡು ಕೆಳಗೆ ಬರುತ್ತಿರುವ ಮಣ್ಣಿನ ರಾಶಿ ದೊಡ್ಡ ಅನಾಹುತದ ಸೂಚನೆ ನೀಡುತ್ತಿದೆ.
Comments are closed.