Mango Rate: ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತ – ಬೆಳೆಗಾರರು, ಗುತ್ತಿಗೆದಾರರು ಕಂಗಾಲು – ಕಂಗೆಟ್ಟ ಗುತ್ತಿಗೆದಾರರು  

Share the Article

Mango Rate: ಸಿಹಿಯಾದ ರುಚಿ ನೀಡುವ ಹಣ್ಣಿನ ರಾಜ ಮಾವು, ಬೆಳೆಗಾರರು ಹಾಗೂ ಮಾರಾಟಗಾರರಿಗೆ ಕಹಿಯಾಗಿದೆ. ಆದರೆ ಬೆಲೆ ಕಡಿಮೆ ಇರುವ ಕಾರಣ ಮಾವಿನ ಹಣ್ಣು ಖರೀದಿ ಮಾಡುವ ಗ್ರಾಹಕರಿಗೆ ರುಚಿಯಾಗಿದೆ. ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಾವಿನ ಹಣ್ಣು ಮಾರುಕಟ್ಟೆಗೆ ಬಂದ ಆರಂಭದಲ್ಲಿ ಉತ್ತಮ ಬೆಲೆ ಇತ್ತು. ಇದರಿಂದ ಮಾವಿನ ಹಣ್ಣು ಮಾರಾಟಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಈಗ ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿದೆ. ಮಾವಿನ ಹಣ್ಣಿನ ಬೆಲೆ ಕುಸಿದಿರುವ ಕಾರಣ ಬೆಳೆಗಾರರು ಮಾವಿನ ಕಾಯಿಗಳನ್ನು ಕೊಯ್ದು ಮಾರದೆ ಮರದಲ್ಲೆ ಬಿಟ್ಟಿದ್ದಾರೆ. ಈಗ ಮಾವಿನ ಹಣ್ಣು ಕೊಯ್ದು ಮಾರಾಟ ಮಾಡಿದರೆ ಸಾಗಾಟ ವೆಚ್ಚ ಕೂಡ ಸಿಗುವುದಿಲ್ಲ. ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಪ್ರತಿ ದಿನ ತುಂತುರ ಮಳೆ ಬೀಳುತ್ತಿರುವ ಕಾರಣ ಹಣ್ಣುಗಳು ಮರದಲ್ಲೆ ಕೊಳೆಯುವ ಪರಿಸ್ಥಿತಿ ಎದುರಾಗಿದೆ. ಮಾವಿನ ಕಾಯಿಗಳ ಮೇಲೆ ಕಪ್ಪು ಕಲೆ ಕಾಣಿಸಿ ಕೊಳ್ಳುತ್ತಿದ್ದು, ಇಂತಹ ಮಾವಿನ ಕಾಯಿ ಕೊಯ್ದು ಮಾಡಿದರೆ ಹೆಚ್ಚು ದಿನ ಇಡಲು ಸಾಧ್ಯವಾಗುವುದಿಲ್ಲ.

ಡಿಸೆಂಬ‌ರ್ ಮತ್ತು ಜನವರಿಯಲ್ಲಿ ಮರಗಳಲ್ಲಿ ಹೂವು ಬಿಟ್ಟಿರುವುದರ ಮೇಲೆ ಬೆಲೆ ನಿಗದಿ ಮಾಡಿ ಇಡೀ ತೋಟವನ್ನು ಗುತ್ತಿಗೆಗೆ ಪಡೆದಿದ್ದಾರೆ. ಆದರೆ ಈಗ ಮಾವಿನ ಹಣ್ಣಿನ ಬೆಲೆ ದಿಢೀರ್ ಕುಸಿತ ಕಂಡಿರುವ ಈ ಮೊದಲು ಕೆ.ಜಿ.ವೊಂದಕ್ಕೆ 120ರಿಂದ 140 ರೂಪಾಯಿ ತನಕ ಇದ್ದ ರಸಪೂರಿ ಮತ್ತು ಬಾದಾಮಿ ಹಣ್ಣು ಈಗ 80ರಿಂದ 100 ರೂಪಾಯಿಗೆ ಇಳಿದಿದೆ. 140 ರೂಪಾಯಿ ಇದ್ದ ಮಲ್ಲಿಕಾ 100 ರೂಪಾಯಿಗೆ ಇಳಿಕೆ ಕಂಡಿದೆ. 150 ರೂಪಾಯಿ ಇದ್ದ ಮಲಗೋವಾ 100 ರೂಪಾಯಿ ಇಳಿಕೆ ಕಂಡಿದೆ. 60ರಿಂದ 30 ರೂಪಾಯಿಗೆ ಇದ್ದ ತೋತಾಪುರಿ ಈಗ 40 ರಿಂದ 50 ರೂಪಾಯಿಗೆ ಕುಸಿದಿದೆ. ಕರ್ನಾಟಕದಲ್ಲಿ ಸುಮಾರು 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇದರಿಂದ ಸುಮಾರು 10 ರಿಂದ 11 ಲಕ್ಷ ಟನ್ ಮಾವಿನ ಹಣ್ಣು ಇಳುವರಿ ಬರುತ್ತದೆ. ಇದರಲ್ಲಿ 4 ಲಕ್ಷ ಟನ್ ಗ್ರಾಹಕರಿಗೆ ಮಾರಾಟವಾದರೆ, ಉಳಿದ ಹಣ್ಣು ಜಾಮ್, ಜ್ಯೂಸ್, ಉಪ್ಪಿನ ಕಾಯಿಗೆ ಬಳಕೆಯಾಗುತ್ತದೆ.

ಮೈಸೂರಿನಲ್ಲಿ ಮಾವಿನ ಹಣ್ಣಿನ ಬೆಲೆ ಕಡಿಮೆಯಾದರೂ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅಷ್ಟಾಗಿ ಪರಿಣಾಮ ಇಲ್ಲ. ಆದರೆ ಕೋಲಾರ ಸೇರಿದಂತೆ ಇತರೆಡೆ ಮಾವಿನ ಹಣ್ಣು ಸುರಿದು ಬೆಂಬಲ ಬೆಲೆ ಘೋಷಣೆ ಮಾಡುವಂತೆ ಬೆಳೆಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಾವಿನ ಬೆಲೆ ದಿಢೀರ್ ಕುಸಿತ ಕಂಡಿರುವ ಹಿನ್ನೆಲೆ ಮಾರುಕಟ್ಟೆ ಯೋಜನೆಯಡಿ ಬೆಲೆ ಕುಸಿತ ಪಾವತಿ ಯೋಜನೆ ಅನುಷ್ಟಾನ ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಮಾವಿನ ಬೆಳೆಗಾರರು ಹಾಗೂ ಮಾರಾಟಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಬೆಲೆ ಕುಸಿತದಿಂದ ಮಾವು ಬೆಳೆಗಾರರು ಹಾಗೂ ಗುತ್ತಿಗೆದಾರರಿಗೆ ನಷ್ಟವಾದರೆ, ಬೆಲೆ ಕಡಿಮೆ ಯಾಗಿರುವ ಕಾರಣ ಗ್ರಾಹಕರು ಹೆಚ್ಚಿನ ಮಾವಿನ ಹಣ್ಣು ಖರೀದಿ ಮಾಡುತ್ತಿದ್ದಾರೆ.

Comments are closed.