ಕೋಳಿಸಾರಿನ ಜೊತೆ 11 ಮುದ್ದೆ ಮುರಿದು ಅದ್ದಿ ತಿಂದು ಪಂದ್ಯ ಗೆದ್ದ ಬೀರಿದ ಬಕಾಸುರ!

Chamarajnagara: ಘಮಘಮ ಕೋಳಿಸಾರು ಜತೆಗಿದ್ದರೆ ಒಂದಷ್ಟು ಹೆಚ್ಚು ಉಂಡು ಸಂಭ್ರಮ ಪಡೋದು ಸಹಜ. ಆದರೆ ರಾಗಿ ಮುದ್ದೆಯ ವಿಷಕ್ಕೆ ಬಂದರೆ, ಕೋಳಿ ಸಾರಿದ್ದರೆ ಒಂದೆರಡು ಮುದ್ದೆ ಹೆಚ್ಚಿಗೆ ಸೇವಿಸಬಹುದು. ಆದರೆ ಇಲ್ಲೊಬ್ಬ ಆಸಾಮಿ 11 ರಾಗಿ ಮುದ್ದೆಗಳನ್ನು ಬಡಿದು ಹಾಕಿ ಬೀಗಿದ ಘಟನೆ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಬೇರೆಡೆ ಹಳ್ಳಿಗಳಲ್ಲಿ ನಡೆಯುವಂತೆ ತಮ್ಮೂರಲ್ಲೂ ಇಂಥದ್ದೊಂದು ಆಸಕ್ತಿಕರ ಸ್ಪರ್ಧೆ ಆಗಲೆಂದು ಗ್ರಾಮದ ರವಿಕುಮಾರ್, ಬಸವರಾಜ್ ಈ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಊಟದ ಪಂದ್ಯ ಏರ್ಪಡಿಸಲಾಗಿತ್ತು. ಇದರಲ್ಲಿ 18 ಮಂದಿ ಪುರುಷರು, ಐವರು ಮಹಿಳೆಯರು ಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನದ ಜೊತೆ ಒಂದು ಜೊತೆ ಬಟ್ಟೆಯನ್ನು ಕೂಡಾ ಬಹುಮಾನವಾಗಿ ಇಡಲಾಗಿತ್ತು.
ಕೋಳಿಸಾರಿನ ಜೊತೆ 11 ಮುದ್ದೆ ಮುರಿದ ಬಕಾಸುರ!
ಪುರುಷರ ವಿಭಾಗದಲ್ಲಿ ಬರೋಬ್ಬರಿ 11 ಮುದ್ದೆ ಮುರಿದು ಕೋಳಿ ಸಾರು ಜತೆ ಅದ್ದಿ ಸವಿದ ಕುನ್ನನಾಯಕ ಪ್ರಥಮ ಬಹುಮಾನವಾಗಿ 5,000 ನಗದು, ಒಂದು ಜೊತೆ ಶರ್ಟ್- ಪಂಚೆ ತಮ್ಮದಾಗಿಸಿಕೊಂಡು ಡರ್ರನೆ ತೇಗಿದ. 9 ಮುದ್ದೆ ಕೋಳಿ ಸಾರು ಸವಿದ ನಾಗಮಲ್ಲ ನಾಯಕ 2,500 ನಗದು ಹಾಗೂ ಒಂದು ಜೊತೆ ಬಟ್ಟೆಯನ್ನು ಬಹುಮಾನವಾಗಿ ಪಡೆದು ರನ್ನರ್ ಆಫ್ ಆದರು.
ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಐವರು ಭಾಗವಹಿಸಿದ್ದು ಇವರಲ್ಲಿ, ಕೋಳಿ ಸಾರಿನ ಜತೆ 5 ಮುದ್ದೆ ಸವಿದ ಮಾದೇವಮ್ಮ ತಮ್ಮ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಗೆ 200 ಮುದ್ದೆ ಹಾಗೂ 30 ಕೆ.ಜಿ. ಕೋಳಿ ಸಾರನ್ನು ಬೇಯಿಸಿ ಹಾಕಲಾಗಿದ್ದು, ಗ್ರಾಮಸ್ಥರು ಊಟದಲ್ಲಿ ತಮ್ಮ ತಮ್ಮ ಪ್ರತಿಭೆ ತೋರಿದ್ದಾರೆ.
Comments are closed.