Kerala: 4ನೇ ತರಗತಿಯಲ್ಲಿದ್ದಾಗ ಮಾಡಿದ್ದ ಜಗಳಕ್ಕೆ 50 ವರ್ಷಗಳ ಬಳಿಕ ಹಲ್ಲೆ – ಇಬ್ಬರು ವ್ಯಕ್ತಿಯ ಬಂಧನ!!

Kerala: ಕೇರಳದಲ್ಲೊಂದು ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿದೆ. ತನ್ನ ಬಾಲ್ಯದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು 50 ವರ್ಷಗಳ ಬಳಿಕ ಗೆಳೆಯನ ಮೇಲೆ ಹಲ್ಲೆ ನಡೆಸಿ ಸೇಡು ತಿರಿಸಿಕೊಂಡಿದ್ದಾರೆ.

ಹೌದು, ಬಾಲ್ಯದ ವಿಚಾರ ಒಂದಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಅಂದಹಾಗೆ 4ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಇಬ್ಬರು ವ್ಯಕ್ತಿಗಳು ತಮ್ಮ ಶಾಲಾ ಸಹಪಾಠಿಯ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದ ವಿಚಿತ್ರ ಘಟನೆಯೇ ಇದಾಗಿದೆ.
ತಮ್ಮ ಮಾಜಿ ಸಹಪಾಠಿಯನ್ನು ಥಳಿಸಿದ ಇಬ್ಬರು ವ್ಯಕ್ತಿಗಳನ್ನು ಮಾಲೋತು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂದು ಗುರುತಿಸಲಾಗಿದ್ದು, ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ವಿಜೆ ಬಾಬು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಬಾಬು ತನ್ನ ಎರಡು ಹಲ್ಲುಗಳನ್ನು ಕಳೆದುಕೊಂಡು ಕಣ್ಣೂರಿನ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಬಾಲಕೃಷ್ಣನ್ ಮತ್ತು ವಿಜೆ ಬಾಬು ನಾಲ್ಕನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರು. ಆ ದಿನ ಬಾಬು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಬಾಲಕೃಷ್ಣನ್ ಹೇಳಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ, ಅದು ಅಂತಿಮವಾಗಿ ಬಗೆಹರಿಯಿತು. ಈ ತಿಂಗಳ 2 ರಂದು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಮತ್ತೆ ಬಾಬು ಅವರನ್ನು ಭೇಟಿಯಾದರು ಮತ್ತು ಬಾಲಕೃಷ್ಣನ್ ಅವರನ್ನು ಏಕೆ ಹೊಡೆದರು ಮತ್ತು ಬಾಬು ಮೇಲೆ ಏಕೆ ಹಲ್ಲೆ ನಡೆಸಿದರು ಎಂಬುದರ ಕುರಿತು ಮತ್ತೆ ಜಗಳವಾಡಿದ್ದಾರೆ.
ಹಳೇ ವಿಚಾರಕ್ಕೆ ಜಗಳ:
ಬಾಲಕೃಷ್ಣನ್, ಮ್ಯಾಥ್ಯೂ ಮತ್ತು ಬಾಬು ಸುಮಾರು ಐದು ದಶಕಗಳ ಹಿಂದೆ ಬಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು ಎನ್ನಲಾಗಿದೆ. ಪೊಲೀಸರ ವಿಚಾರಣೆ ವೇಳೆ ಬಾಲಕೃಷ್ಣನ್ ತಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಬಾಬು ನನ್ನ ಮೇಲೆ ಹಲ್ಲೆ ನಡೆಸಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಆಗಾಗ ನಮ್ಮ ನಡುವೆ ಜಗಳಗಳು ನಡೆಯುತ್ತಿತ್ತು ಆದರೆ ಸೋಮವಾರ(ಜೂ.2) ರಂದು ಮಾಲೋಮ್‌ನ ಜನಗ್ರಾಮ್ ಹೋಟೆಲ್ ಹೊರಗೆ ನಾವು ಮೂವರು ಎದುರುಬದುರಾಗಿದ್ದು ಈ ವೇಳೆ ಅದೇ ಹಳೆಯ ಜಗಳದ ವಿಚಾರ ಮುನ್ನೆಲೆಗೆ ಬಂದು ಮಾತಿಗೆ ಮಾತು ಬೆಳೆದು ಈ ವೇಳೆ ನಾನು (ಬಾಲಕೃಷ್ಣನ್) ಬಾಬು ಅವರನ್ನು ನೆಲಕ್ಕೆ ಬೀಳಿಸಿ ಒತ್ತಿ ಹಿಡಿದೆ ಈ ಸಂದರ್ಭ ನನ್ನ ಜೊತೆಗಿದ್ದ ಮ್ಯಾಥ್ಯೂ ಕಲ್ಲಿನಿಂದ ಬಾಬು ಅವರ ಮುಖ ಮತ್ತು ದೇಹದ ಭಾಗಕ್ಕೆ ಹಲ್ಲೆ ನಡೆಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
Comments are closed.