Dr.Rajkumar: ಡಾ.ರಾಜ್ ತೀರಿಕೊಂಡಾಗ ಅಭಿಮಾನಕ್ಕೆ 8 ಬಲಿಯಾಗಿತ್ತು; ಸಿನಿಮಾ- ಕ್ರಿಕೆಟ್’ನ ಸಾವಿನ ಈ ಅಭಿಮಾನ ಬೇಕಾ?

Share the Article

Dr.Rajkumar: ಬೆಂಗಳೂರು: ಅಂದು ಅಣ್ಣಾವ್ರು ರಾಜ್ ಕುಮಾರ್ ತೀರಿಕೊಂಡಾಗ 8 ಜನರು ಮೃತಪಟ್ಟಿದ್ದರು. ಶಬ್ದವೇದಿ ಚಿತ್ರವು ರಾಜಕುಮಾರ್ ಅವರ ಕೊನೆಯ ಚಿತ್ರವಾಗಿತ್ತು. ಆ ಚಿತ್ರದ ‘ಜನರಿಂದ ನಾನು ಮೇಲೆ ಬಂದೆ; ಜನರನ್ನೇ ನನ್ನ ದೇವರೆಂದೆ’ ಎಂಬ ಜನಪ್ರಿಯ ಹಾಡೊಂದರ ತುಣುಕನ್ನು ಬದಲಿಸಿ, ‘ಜನರಿಂದ ನಾನು ಮೇಲೆ ಬಂದೆ, 8 ಜನರನ್ನು ನಾನು ಮೇಲೆ (ಸ್ವರ್ಗಕ್ಕೆ) ತಂದೆ’ ಎಂದು ಜನರು ಟ್ರೊಲ್ ಮಾಡಿ ಆಡಿಕೊಳ್ಳುವಷ್ಟರ ಮಟ್ಟಿಗೆ ಅಂದು ಅಭಿಮಾನಿ ದೇವರುಗಳ ದುರಭಿಮಾನ ಸಾವಾಗಿ ಪರಿವರ್ತನೆಯಾಗಿತ್ತು.

ಹೌದು, ಅದು 2006 ಇಸವಿ. ಏಪ್ರಿಲ್ 6 ರಂದು ಡಾಕ್ಟರ್ ರಾಜಕುಮಾರ್ ರವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಅವತ್ತು ರಾಜಕುಮಾರ್ ಅವರು ನಿಧನರಾದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಅವರ ಅಭಿಮಾನಿಗಳಲ್ಲಿ ತೀವ್ರ ಶೋಕವನ್ನು ಉಂಟು ಮಾಡಿತ್ತು. ಮರುದಿನ ರಾಜಕುಮಾರ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಂದು ರಾಜ್ ಕುಮಾರ್ ರವರ ಅಂತ್ಯಕ್ರಿಯೆಗೆ ಕೆಲವೇ ಗಂಟೆಗಳ ಮೊದಲು ಅಭಿಮಾನಿಗಳೆಂಬ ದುರಭಿಮಾನಿಗಳು ಕಂಡ ಕಂಡಲ್ಲಿ ಕಲ್ಲೆಸೆದಿದ್ದರು. ಅವತ್ತು ಬೆಂಗಳೂರಿನ ಖ್ಯಾತ ಐಟಿ ಸಂಸ್ಥೆಗಳಾದ ಕಂಪನಿಗಳು ಕೂಡಾ ಆಫೀಸು ಬಂದ್ ಮಾಡಿ ಕೂತಿದ್ದವು.

ಕಲ್ಲು ತೂರಾಟ ಹೆಚ್ಚಾದ ಕಾರಣ ಪೊಲೀಸರು ಅಶ್ರುವಾಯು ಸಿಡಿಸಿದರು. ಆದರೂ ಮಾಬ್ ಪುಂಡಾಟಿಕೆ ತಗ್ಗಲಿಲ್ಲ. ಆಗ ರಾಜಕುಮಾರ್ ಕುಟುಂಬ ಅಭಿಮಾನಿಗಳಲ್ಲಿ ಕೈ ಮುಗಿದು ಬೇಡಿಕೊಂಡು, ಶಾಂತ ರೀತಿಯಲ್ಲಿ ವರ್ತಿಸಲು ಕೇಳಿಕೊಂಡಿತು. ರಾಜ್ ಕುಟುಂಬದ ಸದಸ್ಯರ ಮಾತುಗಳನ್ನು ಕೇಳದೆ ನಿರಾತಂಕವಾಗಿ ಪುoಡಾಟಿಕೆ ಮುಂದುವರಿದಾಗ ಪೊಲೀಸರು ಅನಿವಾರ್ಯವಾಗಿ ಗುಂಡಿಕ್ಕಲು ಆದೇಶಿಸಿದಾಗ ಮೊದಲು ಓರ್ವ ವ್ಯಕ್ತಿ ಸಾವನ್ನಪ್ಪುತ್ತಾನೆ. ಓರ್ವ ಸಾವನ್ನಪ್ಪಿದ ಸುದ್ದಿ ತಿಳಿದ ಗುಂಪು ಕೋಪಗೊಂಡು ಪೊಲೀಸರತ್ತ ಮತ್ತೆ ಕಲ್ಲು ತೂರಾಟ ನಡೆಸಿತು. ಆಗ ಪೊಲೀಸರ ಗುಂಡಿಗೆ ಮತ್ತಿಬ್ಬರು ಬಲಿಯಾದರು. ಹಾಗೆ ಒಟ್ಟಾರೆ ಅಂದು ಪೊಲೀಸರ ಗುಂಡಿಗೆ 7 ಮಂದಿ ದುರಭಿಮಾನಿ ಅಭಿಮಾನಿಗಳು ಬಲಿಯಾಗಿದ್ದರು. ಓರ್ವ ಪೊಲೀಸರು ಅಭಿಮಾನಿಗಳ ಏಟಿಗೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಆದರೆ ಆ 7 ಮಂದಿಯಲ್ಲಿ ಒಬ್ಬಿಬ್ಬರಾದರೂ ಅಮಾಯಕರು ಕೂಡಾ ಇದ್ದಿರುವ ಸಾಧ್ಯತೆಗಳಿವೆ. ಯಾಕೆಂದರೆ, ಪೊಲೀಸರು ಗುಂಡು ಹೊಡೆಯುವುದು ಗುಂಪಿಗೆ ತಾನೇ . ಅಲ್ಲಿ ಗುಂಪಿನಲ್ಲಿರುವ ಜನರು ಯಾವ ರೀತಿ ಚಲಿಸುತ್ತಾರೆ ಮತ್ತು ಗುಂಡು ಯಾರಿಗೆ ತಾಗುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲದ ಕಾರಣ ಅಮಾಯಕರು ಕೂಡಾ ಸಾಯುವ ಸನ್ನಿವೇಶ ಇರುತ್ತದೆ: ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಆದಂತೆ!

ಅಂದಿನ ದುರಭಿಮಾನಕ್ಕೂ ಇಂದಿನ ಘಟನೆಗೂ ಇದೆ ಹೋಲಿಕೆ?!

ಹೌದು, ಅಂದು ಡಾ. ರಾಜ್ ಕುಮಾರ್ ತೀರಿಕೊಂಡಾಗ ಅಲ್ಲಿ ಜನರು ಉದ್ರಿಕ್ತರಾಗಿ ಹಿಂಸೆಗೆ ತೊಡಗಿದ ಕಾರಣ ಗೋಲಿಬಾರ್ ಆಗಿ ಸಾವಾಗಿತ್ತು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡಾ ಅಭಿಮಾನದ ಅತಿರೇಕದ ಜತೆ ಪ್ರಾಯೋಜಕರ ನಿರ್ಲಕ್ಷ್ಯ ಕೂಡಾ ಮೂಲ ಕಾರಣ ಎನ್ನಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 22 ಗೇಟುಗಳಿವೆ. ಅವುಗಳಲ್ಲಿ 3 ರನ್ನು ಮಾತ್ರ ತೆರೆದು ಇಟ್ಟದ್ದು ಕಾಲ್ತುಳಿತಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೆ, ಆರ್‌ಸಿಬಿ ಮ್ಯಾನೇಜ್ಮೆಂಟ್‌ನ ಮಾರ್ಕೆಟಿಂಗ್‌ ಹೆಡ್‌ ಆಗಿರುವ ನಿಖಿಲ್‌ ಸೋಸಲೆಯು, ಸೋಷಿಯಲ್‌ ಮೀಡಿಯಾದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್‌ ಅಂತ ಪೋಸ್ಟ್‌ ಮಾಡಿದ್ದ. ಪೊಲೀಸರ ಅನುಮತಿ ಪಡೆಯದೇ ಪೇಜ್‌ನಲ್ಲಿ ಪರೇಡ್‌ ಬಗ್ಗೆ ಪೋಸ್ಟ್‌ ಮಾಡಿದ್ದು, ಆದರೆ ಪರೇಡ್‌ ಕುರಿತು ಕಮಿಷನರ್‌ ನಿರಾಕರಿಸಿದ ನಂತರವೂ ಈತ ಪೋಸ್ಟ್‌ ಡಿಲೀಟ್‌ ಮಾಡಿರಲಿಲ್ಲ.

ಅಲ್ಲದೇ ಸ್ಟೇಡಿಯಂನಲ್ಲಿ ಸೆಲೆಬ್ರೆಷನ್‌ಗೆ ಉಚಿತ ಟಿಕೆಟ್‌ ಎಂದು ಘೋಷಿಸಲಾಗಿತ್ತು. ಗೇಟ್‌ 9 ಮತ್ತು 10 ರ ಬಳಿ 1 ಗಂಟೆಗೆ ಟಿಕೆಟ್‌ ಸಿಗುತ್ತೆ ಎಂದು ಹೇಳಿದ್ದರು. ಮಧ್ಯಾಹ್ನ 3 ಗಂಟೆಗೆ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಅಂತ ಪೋಸ್ಟ್‌ ಹಾಕಲಾಗಿದೆ. ನಿಖಿಲ್‌ ಸೂಚನೆಯಂತೆ ಡಿಎನ್‌ಎ ಮ್ಯಾನೇಜ್ಮೆಂಟ್‌ ಕಂಪನಿ ಹಾಗೆ ಮಾಡಿದೆ. ಈ ಪೋಸ್ಟ್‌ ಹಾಕಿದ್ದ ಕಾರಣಕ್ಕೆ ಹೀಗೆ ಲಕ್ಷಾಂತರ ಮಂದಿ ಸೇರೋದಕ್ಕೆ ಕಾರಣವಾಗಿದೆ ಅನ್ನೋದು ಸರ್ಕಾರದ ವಾದ. ಆದರೆ ಈಗ ಆರ್‌ಸಿಬಿಯು, ಐಪಿಎಲ್‌ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆಕೊಟ್ಟಿದ್ದೇ ಸರಕಾರ ಎಂದು ಸರ್ಕಾರದ ಮೇಲೆಯೇ ಆರೋಪ ಮಾಡಿದೆ. ಈ ಬಗ್ಗೆ ಹೈಕೋರ್ಟ್‌ಗೆ ಅದು ರಿಟ್‌ ಅರ್ಜಿ ಸಲ್ಲಿಸಿದೆ.

ಸರಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ರಿಟ್‌ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಿಯೇಷನ್ (ಕೆಎಸ್‌ಸಿಎ) ಉಲ್ಲೇಖಿಸಿದೆ. ಘಟನೆಯನ್ನು ಕೆಎಸ್‌ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆ ನಿರ್ವಹಣೆ ಆರ್‌ಸಿಬಿ ಹಾಗೂ ಪೊಲೀಸರ ಕರ್ತವ್ಯ. ಕರ್ನಾಟಕದ ಕ್ರಿಕೆಟ್‌ ನಿಯಂತ್ರಣವಷ್ಟೇ ಕೆಎಸ್‌ಸಿಎ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ.

ಒಟ್ಟಾರೆ RCB, ವಿರಾಟ್ ಕೊಹ್ಲಿ, ಕ್ರಿಕೆಟ್, ಕೈಯಲ್ಲಿ ಅಲ್ಲಾಡಿಸುತ್ತಾ ನಿಲ್ಲುವ ಚಿಯರ್ ಗರ್ಲ್ಸ್, ಒಂದು ಬಾಲ್ ಜತೆ ಉಗುಳಲ್ಪಡುವ ಲೀಟರ್ ಗಟ್ಟಲೆ ಎಂಜಲು ಮಿಶ್ರಿತ ಕಾಮೆಂಟರಿ ಮತ್ತು ಹರಿಯುವ ಹಣದ ಥೈಲಿ. ಇದೆಲ್ಲವನ್ನೂ ನಿಚ್ಚಳ ಫಳ ಫಳ ಹೊಳೆಯುವ ಬೆಳಕಲ್ಲಿ ತೋರಿಸುವ ಟಿವಿ ಚಾನಲ್ಲು – ಈ ಎಲ್ಲವೂ ಅಭಿಮಾನಿಗಳನ್ನು ಹುಟ್ಟು ಹಾಕಿವೆ. ಭಾರತೀಯರು, ಅಷ್ಟೇ ಏಕೆ, ಈ ಉಪಖಂಡವೇ ಅತ್ಯಂತ ಭಾವನಾತ್ಮಕ ಸಮಾಜ. ಬಣ್ಣ ಮಿಳಿಸಿ, ಭಾವನೆ ಬೆರೆಸಿ ದೊಡ್ಡದಾಗಿ ಹೇಳಿದರೆ ಭ್ರಮೆಗೆ ಒಳಗಾಗುವ ಜನ ನಾವು. ಐಪಿಎಲ್ ಎಂಬ ದೈತ್ಯನ ಮಾರ್ಕೆಟಿಂಗ್ ಗೆ ಬಲಿ ಬಿದ್ದ ಅಭಿಮಾನಿ ಎಂಬ ಅಮಾಯಕ ಸತ್ತು ಬಿದ್ದಿದ್ದಾನೆ. ಆಶ್ಚರ್ಯ ಅಂದರೆ ಈ ಸಲ ಸತ್ತು ಹೋದ ಅಭಿಮಾನಿಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಸಶಕ್ತರು, ವಿದ್ಯಾವಂತರು ಮತ್ತು ಒಳ್ಳೆಯ ಉದ್ಯೋಗದಲ್ಲಿ ಇರುವವರು ಅನ್ನೋದು ಗಮನಾರ್ಹ. ಇಲ್ಲದಿದ್ದರೆ, ಹೆಚ್ಚಿನ ಸಂದರ್ಭದಲ್ಲಿ ಆಟೋ ಡ್ರೈವರ್ ಗಳು, ಕೂಲಿಗಳು, ಬಡವರು ಇನ್ನೊಬ್ಬರ ಅಭಿಮಾನ ಬೆಳೆಸಿಕೊಳ್ಳೋದು ಜಾಸ್ತಿ. ಆದ್ರೆ ಐಪಿಎಲ್ ಎಂಬ ರಕ್ಕಸ ಸಂಸ್ಥೆ ಸಾಫ್ಟ್ ವೇರ್ ಎಂಜಿನಿಯರ್ ರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಿಕೊಂಡಿದೆ!!

ಮೊನ್ನೆ, ಅಲ್ಲಿ ಮೊದಲ ಬಾರಿಗೆ ನೂಕು ನುಗ್ಗಲು ಉಂಟು ಮಾಡಿದ, ತಳ್ಳಿದ, ಪ್ರೇರಣೆ ಕೊಟ್ಟ ವ್ಯಕ್ತಿ ಅದ್ಹೇಗೋ ಬಚಾವಾಗಿದ್ದಾನೆ ಎನ್ನಲಾಗುತ್ತಿದೆ. ಆತನನ್ನು/ ಆ ಪುಂಡು ಗುಂಪನ್ನು ತಕ್ಷಣ ಬಂಧಿಸಬೇಕಿದೆ. ಅಂದು ರಾಜ್ ಕುಮಾರ್ ಶವ ಸಂಸ್ಕಾರದ ದಿನ ಪುಂಡಾಟಿಕೆ ಮಾಡಿದ, ಗಲಭೆಗೆ ಕಾರಣ ಆದ 746 ಮಂದಿಯನ್ನು ತದನಂತರ ಬಂಧಿಸಲಾಗಿತ್ತು ಅನೋದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಇವತ್ತು 11 ಸಾವಿನ ನಂತರ ತಪ್ಪು ನಮ್ಮದಲ್ಲ ಅಂತ ಸರ್ಕಾರ ಸೇರಿ ಎಲ್ಲರೂ ಜಾರಿಕೊಳ್ಳತೊಡಗಿದ್ದಾರೆ. ಗೆಲುವು ಎಲ್ಲರಿಗೂ ಬೇಕು! ‘ಈ ಸಲ ಕಪ್ಪು ನಮ್ಮದೇ’ ಅಂದವರು ನಾವು: ಆದ್ರೆ ಏನಾದರೂ ಯಡವಟ್ಟು ಆದಾಗ, ಪ್ರತಿ ಸಲ ‘ತಪ್ಪು ಬೇರೆ’ಯವರದೇ ಇರುತ್ತೆ. ಅಲ್ಲವೇ?!

Comments are closed.