Mahesh Shetty Timarodi: ತಿಮರೋಡಿಯನ್ನು ಗಡೀಪಾರು ಲಿಸ್ಟ್ ನಲ್ಲಿ ಹಾಕಿದ್ದು ಯಾಕೆ? ಪೊಲೀಸರ ನಿಯತ್ತಿನ ಮೇಲೆ ಜನಕ್ಕೆ ಶುರುವಾಯ್ತು ಸಂಶಯ!

Share the Article

Mangalore: ಮಂಗಳೂರು: ದಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದಕ್ಕೆoದು ಮಂಗಳೂರಿಗೆ ಖಡಕ್ ಪೊಲೀಸ್ ಮುಖ್ಯಸ್ಥರನ್ನು ತಂದು ಕೂರಿಸಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಯೆoದು ಹೆಸರು ಗಳಿಸಿರುವ ಡಾ.ಅರುಣ್ ಕೆ. ಅವರನ್ನು ದಕ ಜಿಲ್ಲಾ ಎಸ್ ಪಿಯನ್ನಾಗಿ ಸರ್ಕಾರ ನೇಮಕ ಮಾಡಿದೆ. ಮಂಗಳೂರಿನ ಜಿಲ್ಲೆಯಾದ್ಯಂತ (ಗ್ರಾಮಾಂತರ ಪ್ರದೇಶದ) ಕಾನೂನು ಸುವ್ಯವಸ್ಥೆಯನ್ನು ಅರುಣ್ ಕೆ. ನೋಡಿಕೊಳ್ಳಲಿ, ಕಂಟ್ರೋಲ್ ಬಿಗಿ ಇರಲಿ ಅನ್ನೋದು ಸರಕಾರದ ಮೇಲ್ನೋಟಕ್ಕೆ ಕಾಣುವ ಉದ್ದೇಶ.

ಹಾಗಾಗಿ SP ಡಾ. ಅರುಣ್ ಕೆ ಮಂಗಳೂರಿಗೆ ಬರುತ್ತಿದ್ದಂತೆ ನಿಜವಾಗಿಯೂ ಶಾಂತಿಪ್ರಿಯರು ಒಂದಷ್ಟು ನಿರಾಳರಾಗಿದ್ದರು. ಅತ್ತ ಹೊಸದಾಗಿ ಮಂಗಳೂರಿಗೆ ಎಂಟ್ರಿ ಆದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರು ಕೂಡಾ ಕೋಮು ಗಲಭೆ ಎಬ್ಬಿಸಬಲ್ಲ ವ್ಯಕ್ತಿಗಳಿಗೆ ಸಂದೇಶ ರವಾನಿಸಿದ್ದರು. ಆರೋಪ ಮಾಡಿದವನು ಮಾತ್ರ ಆರೋಪಿಯಲ್ಲ ಆರೋಪ ಮಾಡಿದವನಿಗೆ ಹಣಕಾಸಿನ ಸಹಾಯ ಮಾಡಿದವರು, ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟವರು, ಅಡಗಿಕೊಳ್ಳಲು ತಪ್ಪಿಸಿಕೊಳ್ಳಲು ಸಹಾಯ ಮಾಡಿರುವವರು, ಎಲ್ಲರೂ ಆರೋಪಿಗಳೇ! ಇಂಥಹಾ ಎಲ್ಲರ ಮೇಲೆ ಕ್ರಮ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಹಾಗಾಗಿ ಒಂದಷ್ಟು ಬಿಗಿ ಮತ್ತು ಪಾರದರ್ಶಕ ಪೊಲೀಸ್ ವ್ಯವಸ್ಥೆ ದಕ್ಷಿಣ ಕನ್ನಡಕ್ಕೆ ಬಿದ್ದಿದೆ ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯವಾಗಿತ್ತು. ಆದರೆ ಜನರ ನಂಬಿಕೆ ಎಲ್ಲೋ ಹುಸಿಯಾಗಲು ಪ್ರಾರಂಭವಾಗಿದೆ ಅನ್ನಿಸಲು ಶುರುವಾಗಿದೆ. ಕಾರಣ ಕೋಮು ಗಲಭೆ ಎಬ್ಬಿಸಬಲ್ಲ ವ್ಯಕ್ತಿಗಳನ್ನು ಬಿಟ್ಟು, ಕೆಲವು ಸಾಮಾಜಿಕ ಹೋರಾಟಗಾರರನ್ನು ಗಡೀಪಾರು ಲಿಸ್ಟ್ ನ ಒಳಗೆ ತಂದದ್ದು.

ಮುಖ್ಯವಾಗಿ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡೀಪಾರು ಲಿಸ್ಟ್ ನ 36 ಜನರ ಒಳಗೆ ತಂದದ್ದು ಜನಸಾಮಾನ್ಯರನ್ನು ಅಚ್ಚರಿಗೆ ತಳ್ಳಿದೆ. ಇಲ್ಲಿ ಸ್ಪಷ್ಟವಾಗಿ ರಾಜಕೀಯ ಮುಖಂಡರ ಕೈವಾಡ ಕಾಣಿಸುತ್ತಿದೆ. ಧರ್ಮಸ್ಥಳ ಪ್ರಭುತ್ವದ ಜತೆ ನಿರಂತರ ಸಾಮಾಜಿಕ ಕದನ ಇಟ್ಟುಕೊಂಡವರು ಮಹೇಶ್ ಶೆಟ್ಟಿ ತಿಮರೋಡಿ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ 400 ಕ್ಕೂ ಹೆಚ್ಚು ಕೊಲೆಗಳ ಪ್ರಕರಣದ ತನಿಖೆ ನಡೆಸಬೇಕು ಎಂದು ತೊಡೆ ತಟ್ಟಿ ನಿಂತವರು ತಿಮರೋಡಿ. ಅಲ್ಲದೆ ಮೀಟರ್ ಬಡ್ಡಿ ದಂಧೆಯ ವಿರುದ್ಧ ಕೂಡಾ ತಿಮರೋಡಿ ತಂಡ ಹೋರಾಟ ನಡೆಸಿಕೊಂಡು ಬರುತ್ತಿದೆ. ಹೀಗಿರುವಾಗ ಒಂದು ಕಾಲದ ಹಿಂದೂ ಪರ ಹೋರಾಟಗಾರ ಈಗ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಹೀಗಿರುವಾಗ, ಮಹೇಶ್ ಶೆಟ್ಟಿ ತಿಮರೋಡಿಯನ್ನು ಕೋಮು ಗಲಭೆಯ ವಿಚಾರದಲ್ಲಿ ಗಡೀಪಾರು ಲಿಸ್ಟ್ ನಲ್ಲಿ ಹಾಕಿದ್ದು ಯಾಕೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಯಾಕೆ ಎಂಬ ಪ್ರಶ್ನೆಯ ಜೊತೆಗೆ ಜನರಲ್ಲಿ ಉತ್ತರ ಸ್ಪಷ್ಟವಿದೆ. ಹೋರಾಟವನ್ನು ಹತ್ತಿಕಲು ಪ್ರಯತ್ನಿಸುತ್ತಿರುವ ಧರ್ಮಸ್ಥಳದ ದುಡ್ಡಿನ ಧಣಿಗಳು ಮತ್ತು ಎಲ್ಲಾ ಪಕ್ಷಗಳಲ್ಲೂ ಇರುವ ಅವರ ರಾಜಕೀಯ ಚೇಲಾಗಳು ಸೇರಿಕೊಂಡು ಆ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ನಡೆ ಸಂಶಯಾದಾಸ್ಪದವಾಗಿದೆ.

ಹರೀಶ್ ಪೂಂಜಾರಿಗೆ ಇಲ್ಲ, ಮಹೇಶ್ ಶೆಟ್ಟಿಗೆ ಯಾಕೋ ಗಡಿಪಾರು?!

ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಗಡಿಪಾರು ಮಾಡುವ ಇನ್ನೊಂದು ಪ್ರಮುಖ ಉದ್ದೇಶವೇನೆಂದರೆ ಹರೀಶ್ ಪೂಂಜಾರ ಚಿತಾವಣೆ, ಧರ್ಮಸ್ಥಳದ ಒತ್ತಡವೂ ಇದರ ಹಿಂದೆ ಕೆಲಸ ಮಾಡಿದೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ. ಹಿಂದಿನಿಂದಲೂ ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಕೋಮುಪ್ರಚೋದನಕಾರೀ ಭಾಷಣ ಮಾಡಿ ಅದೆಷ್ಟೋ ಕೇಸುಗಳನ್ನು ಹಾಕಿಸಿಕೊಂಡಿರುವ ಶಾಸಕ ಹರೀಶ್ ಪೂಂಜಾರ ವಿರುದ್ಧ ಪೊಲೀಸ್ ಇಲಾಖೆ ಇದೇ ರೀತಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದೇ ಆಶ್ಚರ್ಯ. ಯಾಕೆಂದರೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದವರೆಲ್ಲರ ಮೇಲೂ ಇಲಾಖೆ ಕ್ರಮಕ್ಕೆ ಮುಂದಾಗುವುದಾದರೆ ಹರೀಶ್ ಪೂಂಜ ಹಿಂದೆ ಅದೆಷ್ಟೋ ಸಾರ್ವಜನಿಕರ ಸಭೆ ಸಮಾರಂಭಗಳಲ್ಲಿ ಅದೆಷ್ಟೋ ಕೋಮು ಪ್ರಚೋದನಕಾರಿ ಭಾಷಣ ಮಾಡಿದರೂ ಅವರ ವಿರುದ್ಧ ಮಾತ್ರ ಯಾವುದೇ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗದೆ, ಮಹೇಶ್ ಶೆಟ್ಟಿ ತಿಮರೋಡಿ ಕೇವಲ ಸೌಜನ್ಯಾ ಹೋರಾಟ ನಡೆಸುತ್ತಾ ಯಾವಾಗಲಾದರೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿಯೇ ಕಾಣಿಸುತ್ತಾರೆಂಬ ಭಯದಲ್ಲೇ ಪಟ್ಟಭದ್ರ ಹಿತಾಸಕ್ತಿಗಳೆಲ್ಲ ಸೇರಿಕೊಂಡು ತಿಮರೋಡಿ ವಿರುದ್ಧ ಈ ರೀತಿ ವ್ಯವಸ್ಥಿತ ಷಡ್ಯಂತ್ರ ನಡೆಸಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ತಕ್ಷಣ ಗಲಭೆ ಮಾಡಬಲ್ಲವರನ್ನು ಮಾತ್ರ ಕರೆದು ವಿಚಾರಿಸಿ. ಯಾವುದೋ ಪ್ರಕರಣದ/ ಹೋರಾಟದ ವ್ಯಕ್ತಿಗಳನ್ನು ಕೋಮು ಗಲಭೆಯ ನೆಪದಲ್ಲಿ ಕರೆದು ಟಾರ್ಚರ್ ಕೊಡುವ ಕೆಲಸಕ್ಕೆ ಹೋಗಬೇಡಿ. ಲಜ್ಜೆಗೆಟ್ಟ ನಮ್ಮ ರಾಜಕೀಯ ನಾಯಕರ ಮಾತಿಗೆ ಮಣಿಯದೆ, ರೂಲ್ ಪುಸ್ತಕ ಕೈಯಲ್ಲಿ ಮತ್ತು ಮನಸ್ಸಲ್ಲಿ ಇಟ್ಟುಕೊಂಡು ಎಚ್ಚರಿಕೆಯಿಂದ ಎಸ್ ಪಿ ಡಾ. ಅರುಣ್ ಕೆ.ಯವರಾಗಲೀ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ದಿಯವರಾಗಲೀ ಕಾರ್ಯ ನಿರ್ವಹಿಸಿ ಅನ್ನುತ್ತಿದ್ದಾರೆ ಪ್ರಜ್ಞಾವಂತ ಜನರು. ಕಠಿಣ ಪರಿಶ್ರಮಪಟ್ಟು ಈ ದೊಡ್ಡ ಹುದ್ದೆಗೆ ಬಂದವರು ನೀವು. ಈಗಾಗಲೇ ಇಲಾಖೆಯಲ್ಲಿ ಅದ್ಭುತ ಹೆಸರು ನಿಮಗಿದೆ. ಆ ಹೆಸರನ್ನು ಉಳಿಸಿಕೊಳ್ಳಿ, ಬೆಳೆಸಿಕೊಳ್ಳಿ ಅನ್ನೋದು ಕರಾವಳಿ ಪ್ರಜ್ಞಾವಂತರ ಕಾಳಜಿ.

Comments are closed.