Mangalore: ಬಂಟ್ವಾಳ ಯುವಕನ ಕೊಲೆ ಪ್ರಕರಣ: ಆಸ್ಪತ್ರೆ ಮುಂದೆ ಜಮಾಯಿಸಿದ ಮುಸ್ಲಿಂ ಮುಖಂಡರು

Share the Article

Mangalore: ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪ ಇರಾಕೋಡಿ ಎಂಬಲ್ಲಿ ಇಂದು ಇಬ್ಬರು ಮುಸ್ಲಿಂ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆ ಮುಂಭಾಗ ಜನರ ಜಮಾಯಿಸಿದ್ದು, ಆರೋಗ್ಯ ವಿಚಾರಣೆಗೆಂದು ಬಂದ ದ.ಕ. ಜಿಲ್ಲಾ ವಕ್ಫ್‌ ಸಲಹ ಸಮಿತಿ ಅಧ್ಯಕ್ಷ ನಾಸಿರ್‌ ಲಕ್ಕಿಸ್ಟಾರ್‌ ಸೇರಿ ಕೆಲ ಮುಸ್ಲಿಂ ಮುಖಂಡರನ್ನು ಯುವಕರು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬಜಪೆ ಬೃಹತ್‌ ಜನಾಗ್ರಹ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ನಾಯಕರ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆಯಿತು.

ಪದೇ ಪದೇ ಇಂಥಹ ಘಟನೆಗಳು ನಡೆದರೂ ಸರ್ಕಾರ ಏನೂ ಸಮರ್ಥ ಕ್ರಮ ಕೈಗೊಳ್ಳುತ್ತಿಲ್ಲ. ನೀವೆಲ್ಲ ಲೀಡರ್ ಗಳು ಏನಕ್ಕೆ? ಯಾಕೆ ಸರ್ಕಾರದ ಮೇಲೆ ಒತ್ತಡ ಹಾಕಲ್ಲ. ಪ್ರಚೋದನೆ ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದು ವರದಿಯಾಗಿದೆ.

ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್  ರವರು ಕರಾವಳಿಯ ಐದು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಸೆಕ್ಷನ್‌ 63 ರ ಅಡಿಯಲ್ಲಿ ಮೇ 27 ರ ಸಂಜೆ 6 ಗಂಟೆಯಿಂದ ಮೇ 30ರ ಸಂಜೆ 6 ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

ಇಂದು ಸಂಜೆ ಬಂಟ್ವಾಳದ ಇರಾಕೋಡಿ ಎಂಬಲ್ಲಿ ಮರಳು ಅನ್‌ಲೋಡ್‌ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಡಿದು ಪರಾರಿಯಾಗಿರುವುದಾಗಿ ವರದಿಯಾಗಿದೆ.

ಪಿಕಪ್‌ ಚಾಲಕ ಹನೀಫ್‌ ಎಂಬುವವರ ಸಹೋದರ ಕೊಳತ್ತಮಜಲು ನಿವಾಸಿ ರಹೀಂ (34) ಎಂಬಾತ ಹತ್ಯೆಯಾಗಿ, ಈತನ ಜೊತೆ ಇನ್ನೋರ್ವ ಶಾಫಿ ಎಂಬಾತನ ಕೈಗೆ ಪೆಟ್ಟು ಬಿದ್ದಿದೆ. ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಈ ಕೊಲೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದಿಲ್ಲವಾದರೂ ಇದರ ಹಿಂದೆ ಅಕ್ರಮ ಮರಳುಗಾರಿಕೆ ದಂಧೆ ಮಾಫಿಯಾದ ಕೈವಾಡ ಇದೆಯೆಂಬ ಮಾಹಿತಿಗಳು ಕೇಳಿ ಬರುತ್ತಿವೆ ಎನ್ನಲಾಗಿದೆ. ಇನ್ನೊಂದು ಮೂಲದ ಪ್ರಕಾರ ಅಕ್ರಮ ಸಂಬಂಧದ ಸುದ್ದಿ ಬರುತ್ತಿದ್ದು, ಸದ್ಯಕ್ಕೆ ಎಲ್ಲವೂ ಊಹಾಪೋಹಗಳು. ಪೊಲೀಸರ ತನಿಖೆಯಿಂದ ಎಲ್ಲವೂ ಸ್ಪಷ್ಟವಾಗಬೇಕಿದೆ.

ಎಸ್ ಡಿಪಿಐ ಖಂಡನೆ

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ Anty communal Force ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿ ಹೋಗಿದ್ದಾರೆ. ನಂತರದ ದಿನಗಳಲ್ಲಿ ಸಂಘಪರಿವಾರದ ಅಟ್ಟಹಾಸ ಹೆಚ್ಚಾದರೂ ಕೂಡಾ ಗೃಹ ಇಲಾಖೆ ಸಂಪೂರ್ಣವಾಗಿ ಮೌನವಾಗಿರುವುದೇ ಈ ಹತ್ಯೆಗೆ ಕಾರಣ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯನ್ನು ಸ್ಪೀಕರ್ ಯುಟಿ ಖಾದರ್ ರವರು ಖಂಡಿಸಿದ್ದಾರೆ. ಪದೇ ಪದೇ ಪ್ರತೀಕಾರದ ಮಾತು ಕೇಳಿಬಂದಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲದೇ ಇರುವುದೇ ಈ ಕೃತ್ಯಕ್ಕೆ ಕಾರಣ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಕೂಡಾ ಕೃತ್ಯವನ್ನು ಖಂಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹತ್ಯೆಗೆ ಸಚಿವ ಗುಂಡೂರಾವ್​ ಖಂಡನೆ

ಬಂಟ್ವಾಳದ ಕೊಳತ್ತಮಜಲು ಬಳಿ ಅಬ್ದುಲ್ ರಹೀಮ್ ಯುವಕನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ DG & IGP ಹಾಗೂ ಕಾನೂನು ಸುವ್ಯವಸ್ಥೆ ADGP ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಸೂಕ್ತ ಬಿಗಿ ಕಾನೂನು ಕ್ರಮಗಳನ್ನ ಜರುಗಿಸುವಂತೆ ಸೂಚನೆ ನೀಡಿದರು. ಅಲ್ಲದೇ ಅವರು ಮಂಗಳೂರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಯೊಂದಿಗೆ ಮಾತನಾಡಿ, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ನಿಗಾ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

Comments are closed.