ಇಸ್ರೋದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1.03 ಕೋಟಿ ಬಾಚಿಕೊಂಡಿದ್ದ ಮಹಿಳೆ: ಕೋರ್ಟ್ ಜಾಮೀನು ನಿರಾಕರಣೆ

Bangalore: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ವಿವಿಧ ಉನ್ನತ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪುರುಷರ ಬಳಿ ಹಣ ಪೀಕುತ್ತಿದ್ದ ಬೆಂಗಳೂರಿನ ಗೋವಿಂದರಾಜನಗರದ ನಿವಾಸಿ ವಿನಾತಾಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದ್ದು, ಆಕೆಗೆ ಕಸ್ಟಡಿ ವಿಚಾರಣೆ ಅಗತ್ಯವಿದೆ ಎಂದು ತಿಳಿಸಿದೆ. ಇತ್ತೀಚಿನ ಪ್ರಕರಣದಲ್ಲಿ ವಿನುತಾ ಇಸ್ರೋದಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬರಿಂದ 1.03 ಕೋಟಿ ರೂಪಾಯಿ ವಂಚಿಸಿದ್ದಳು.

ಕೋರ್ಟ್ ನ ನೋಟಿಸ್ ಪ್ರಕಾರ, ಅರ್ಜಿದಾರರು ಮೇ 9 ರಂದು ತನಿಖಾ ಅಧಿಕಾರಿ ಮುಂದೆ ಹಾಜರಾಗಬೇಕಾಗಿದ್ದು, ಆದರೆ ವಿನುತಾ ನೊಟೀಸ್ ಗೆ ಕ್ಯಾರೇ ಅಂದಿರದ ಕಾರಣ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ವಿನುತಾ ಕೊಳ್ಳೇಗಾಲ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಇಂತಹ ಸಂದರ್ಭಗಳಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಯಾದರೆ, ಇದೇ ರೀತಿ ಅಪರಾಧಗಳನ್ನು ಮುಂದುವರಿಸುವ ಸಾಧ್ಯತೆಗಳಿರುತ್ತವೆ ಎಂದು ಕೋರ್ಟ್ ತಿಳಿಸಿದೆ.
ದೂರುದಾರ ಸಂಜಯ್ ಹೇಳುವುದೇನೆಂದರೆ ಅವರನ್ನು ಇಸ್ರೋಗೆ ಕರೆದೊಯ್ದು ಸುಪ್ರಥೋ ಪಾಥೋ, ರೆಡ್ಡಪ್ಪ, ರಾಜೇಂದ್ರ ಎ ಕೆ ಮತ್ತು ಅನಿಲ್ ಕುಮಾರ್ ಎಂಬುವರಿಗೆ ವಿನುತಾ ಪರಿಚಯ ಮಾಡಿಸಿರುತ್ತಾಳೆ. ಅವರು ಕೂಡ ಮೊತ್ತವನ್ನು ಪಾವತಿಸುವಂತೆ ಸಂಜಯ್ ಗೆ ಒತ್ತಾಯಿಸಿದ್ದು, ಕೆಲಸ ಸಿಗುತ್ತದೆ ಎಂದು ನಂಬಿ ಸಂಜಯ್ 23 ಲಕ್ಷ ರೂಪಾಯಿಗಳನ್ನು ಪಾವತಿಸಿರುತ್ತಾರೆ. ಕಾಲಾನಂತರದಲ್ಲಿ, ಸಂಜಯ್ ಒಟ್ಟು 1.03 ಕೋಟಿ ರೂಪಾಯಿಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದು, ಆದರೆ ಆರೋಪಿಗಳು ಕೆಲಸ ಕೊಡಿಸದ ಹಾಗೂ ಹಣವನ್ನು ಹಿಂತಿರುಗಿಸದ ಕಾರಣ ಕೊನೆಗೆ ಸಂಜಯ್ ಕಳೆದ ಮೇ ಮೊದಲ ವಾರದಲ್ಲಿ ವಿನುತಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ.
Comments are closed.