

Mangalore: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಯುವಕರಿಂದ ಲಕ್ಷಗಟ್ಟಲೆ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್ (36) ಬಂಧಿತ ಆರೋಪಿ. ಈತನನ್ನು ಹೆಚ್ಚಿನ ತನಿಖೆಗೆಂದು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಯಾವುದೇ ಪರವಾನಗಿ ಪಡೆಯದೇ ಕಂಪನಿ ಆರಂಭ ಮಾಡಿದ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯದ ವಲಸೆ ವಿಭಾಗದ ಅಧಿಕಾರಿಗಲೂ ಆರೋಪಿಯ ವಿರುದ್ಧ ದೂರು ನೀಡಿದ್ದು, ಈ ಕುರಿತು ನಗರ ಪೂರ್ವ ಠಾಣೆಯಲ್ಲಿ 2024ನೇ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದಲ್ಲಿ ಕೆಲಸ ನೀಡುವುದಾಗಿ ನಂಬಿಸಿ ರೂ.1.65 ಲಕ್ಷ ಹಣ ಪಡೆದು ವಂಚನೆ ಮಾಡಿದ ಕುರಿತು ಸಂತ್ರಸ್ತರೊಬ್ಬರು ನಗರದ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ದಾಖಲು ಮಾಡಲಾಗಿತ್ತು. ಆರೋಪಿಯು ಸಾಕಷ್ಟು ಯುವಕರಿಂದ ಇದೇ ರೀತಿ ಸುಮಾರು ರೂ.1.82 ಕೋಟಿ ಗೂ ಅಧಿಕ ಹಣ ಪಡೆದು ವಂಚನೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.













