Belthangady: ಅತಿಯಾದ ನಿದ್ರೆ ಮಾತ್ರೆ ಸೇವನೆ: ತಾಯಿ ಸಾವು, ಮಗ ಗಂಭೀರ

Share the Article

Belthangady: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾದ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧೆ ತಾಯಿ ಸಾವಿಗೀಡಾಗಿದ್ದು, ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.

ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ.ಕುಂಇರಾಮನ್‌ ನಾಯರ್‌ ಅವರ ಪತ್ನಿ ಕಲ್ಯಾಣಿ (96) ಮೃತ ಹೊಂದಿದವರು. ಅವರ ಪುತ್ರ ಖ್ಯಾತ ಕಲಾವಿದ ಶಿಕ್ಷಕ ಜಯರಾಂ ಕೆ (58) ಗಂಭೀರ ಅವಸ್ಥೆಯಲ್ಲಿದ್ದಾರೆ. ಇವರನ್ನು ಮಂಗಳೂರಿನ ವೆನ್ಲಕ್‌ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೂಳೂರಿನ ಮನೆಯಲ್ಲಿ ಯಾವುದೇ ಚಲನವಲನ ಕಾಣದೇ ಇರುವುದನ್ನು ಗಮನಿಸಿ ನೆರೆಹೊರೆಯವರು ಬಂದು ನೋಡಿದಾಗ, ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿರುವುದು ಕಂಡು ಬಂದಿದೆ.

ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಮೇ 12 ರಂದು ಸಂಜೆ ಕಲ್ಯಾಣಿ ಅವರು ಸಾವಿಗೀಡಾದರು. ಮಗ ಜಯರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಾಲದ ಸಮಸ್ಯೆ, ಅನಾರೋಗ್ಯದ ಕಾರಣದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ನಾಲ್ಕು ಪುಟಗಳ ಪತ್ರ ಲಭಿಸಿದೆ.

ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಿದ್ದು, ಇವರ ಆರೈಕೆಯನ್ನು ಮಗ ಮಾಡುತ್ತಿದ್ದರು. ಆದ್ದರಿಂದ ನಾನು ಸತ್ತರೆ ಅಮ್ಮನ್ನು ನೋಡುವವರು ಯಾರು ಎನ್ನುವ ಕಾರಣಕ್ಕೆ ಜೊತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.

Comments are closed.