Gold Smuggling Case: ನಟಿ ರನ್ಯಾ ರಾವ್‌ ವಿವಾಹದ ಆಲ್ಬಂ ಪರಿಶೀಲಿಸಿದ ಸಿಬಿಐ!

Gold Smuggling Case: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವವ ಗೆ ಸಂಕಷ್ಟ ಒಂದರ ಮೇಲೊಂದರಂತೆ ಬಂದಿದೆ. ಸಿಬಿಐ ಅಧಿಕಾರಿಗಳು ಕಳೆದ ಎರಡು ದಿನಗಳ ಕಾಲ ರನ್ಯಾರಾವ್‌ ಮನೆ, ವಿವಾಹವಾದ ಹೋಟೆಲ್‌, ಕೆಐಎಡಿಬಿ ಕಚೇರಿಯಲ್ಲಿ ಪರಿಶೀಲನೆ ಮಾಡಿದ್ದಾರೆ.

ಏಕಕಾಲಕ್ಕೆ ಮೂರು ಕಡೆ ದಾಳಿ ಮಾಡಿ ಶೋಧ ನಡೆಸಲಾಗಿದೆ. ಸೋಮವಾರ ಸಂಜೆ 6 ಗಂಟೆಯಿಂದ ಮಂಗಳವಾರ ಬೆಳಗ್ಗಿನವರೆಗೆ ಶೋಧ ಕಾರ್ಯ ನಡೆದಿದೆ. 12 ಎಕರೆ ಜಮೀನು ಕುರಿತ ದಾಖಲೆಗಳು, ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ನಡೆದ ಮದುವೆಗೆ ಆಗಮಿಸಿದ ಗಣ್ಯರ ಮಾಹಿತಿ, ಲ್ಯಾವೆಲ್ಲ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿರುವ ಮದುವೆ ಆಲ್ಬಂ, ಪೆನ್‌ಡ್ರೈವ್‌, ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದರ ಜೊತೆಗೆ ಮೊಬೈಲ್‌, ಲ್ಯಾಪ್‌ಟಾಪ್‌ನ್ನು ಕೂಡಾ ಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ.

ವಿವಾಹ ಸಮಾರಂಭದಲ್ಲಿ ರಾಜ್ಯದ ಕೆಲ ಪ್ರಭಾವಿ ರಾಜಕೀಯ ಮುಖಂಡರುಗಳು ಭಾಗಿಯಾಗಿರುವುದು ಪತ್ತೆಯಾಗಿದೆ. ರಾಜ್ಯದ ರಾಜಕೀಯ ಮುಖಂಡರೊಬ್ಬರು ದುಬಾರಿ ಮೌಲ್ಯದ ನಕ್ಲೇಸ್‌ ನೀಡಿದ್ದಾರೆ ಎನ್ನಲಾಗಿದೆ. ತರುಣ್‌ ಕೊಂಡುರಾಜು, ಇತರೆ ಕೆಲ ಉದ್ಯಮಿಗಳು ಲಕ್ಷಾಂತರ ಮೌಲ್ಯದ ಉಡುಗೊರೆ ನೀಡಿದ್ದಾರೆ. ಅವರ ಹೆಸರನ್ನು ಪಟ್ಟಿ ಮಾಡಲಾಗಿದೆ. ಇವರೆಲ್ಲರಿಗೂ ಮುಂದಿನ ದಿನಗಳಲ್ಲಿ ಸಿಬಿಐ ಅಧಿಕಾರಿಗಳು ನೋಟಿಸ್‌ ನೀಡುವ ಸಾಧ್ಯತೆ ಇದೆ.

ಇನ್ನು ಅರ್ಜಿ ಹಾಕಿದ ಎರಡು ತಿಂಗಳಿನಲ್ಲಿಯೇ ಕೆಐಎಡಿಬಿಯಿಂದ ಅನುಮೋದನೆಯಾದ ಭೂ-ವಿವರದ ಕುರಿತು ಮಾಹಿತಿ ಕಲೆಹಾಕಲಾಗುತ್ತಿರುವುದಾಗಿ ಸಿಬಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಡಿಆರ್‌ಐ, ಸಿಬಿಐ ಈಗಾಗಲೇ ಅಕ್ರಮ ಚಿನ್ನ ಸಾಗಾಟದ ಪ್ರಕರಣದ ತನಿಖೆಯನ್ನು ಮಾಡುತ್ತಿದೆ. ಈ ಮಧ್ಯೆ ಹಿರಿಯ ಐಪಿಎಸ್‌ ಅಧಿಕಾರಿಗಳು ನೀಡಿದ್ದ ಶಿಷ್ಟಾಚಾರ ಉಲ್ಲಂಘನೆ ಆರೋಪ ಪ್ರಕರಣವನ್ನು ಸಿಐಡಿ ತನಿಖೆ ಕೈಗೆತ್ತುಕೊಂಡಿದೆ.

Comments are closed.