Belthangady: 3 ತಾಲೂಕು ಬೆಸೆಯುವ ಕೋಡಂಗೇರಿ-ಉಪ್ಪಾರಹಳ್ಳ ಸೇತುವೆ: ಕಿಂಡಿ ಅಣೆಕಟ್ಟು ಲೋಕಾರ್ಪಣೆಗೆ ಸಜ್ಜು

Share the Article

Belthangady: ಬೆಳ್ತಂಗಡಿ (Belthangady) , ಪುತ್ತೂರು ಮತ್ತು ಕಡಬ ತಾಲೂಕುಗಳನ್ನು ಬೆಸೆಯುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋಡಂಗೇರಿ ಉಪ್ಪಾರಹಳ್ಳ ಸೇತುವೆ ಅಣೆಕಟ್ಟು ಲೋಕಾರ್ಪಣೆಗೆ ಸಜ್ಜಾಗಿದೆ. ಸಂಪರ್ಕ ಸೇತುವೆ ಸಹಿತವಾಗಿ ನಿರ್ಮಿಸಿರುವ 3.35 ಕೋಟಿ ರೂ. ವೆಚ್ಚದ ಈ ಕಿಂಡಿ ಅಣೆಕಟ್ಟಿನಿಂದಾಗಿ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ನೀರು ಸಂಗ್ರಹಕ್ಕೆ ಸಹಕಾರಿಯಾಗಲಿದೆ.

ಕೊಕ್ಕಡ ಗ್ರಾಮದ 400 ಮನೆಗಳು ಮತ್ತು ಗೋಳಿತೊಟ್ಟು ಗ್ರಾಮದ 100ಕ್ಕೂ ಹೆಚ್ಚು ಮನೆಗಳಿಗೆ ಈ ಸೇತುವೆಯ ಅಗತ್ಯವಿತ್ತು. ಊರಿನ ಹಿರಿಯರಾದ ದಿ.ರಾಮಣ್ಣ ಗೌಡ ಕೊಡಿಂಗೇರಿ ಹಾಗೂ ಗಂಗಯ್ಯ ಗೌಡರ ನೇತೃತ್ವದಲ್ಲಿ ಸೇತುವೆಗಾಗಿ ಹೋರಾಟ ನಡೆದಿತ್ತು. ಕೊನೆಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಶಾಸಕ ಹರೀಶ್ ಪೂಂಜ ಅವರ ಮುತ್ತುವರ್ಜಿಯಿಂದ ಯೋಜನೆ ಮಂಜೂರಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ಬಹುಪಯೋಗಿ ಸೇತುವೆ:
ಸೇತುವೆ ಮೂಲಕ ಪಟ್ರಮೆಯಿಂದ ಧರ್ಮಸ್ಥಳಕ್ಕೆ ಸುಲಭಸಂಪರ್ಕ ಸಾಧ್ಯವಾಗಲಿದೆ. ಕಡಬ ಮತ್ತು ಪುತ್ತೂರು ತಾಲೂಕಿಗೂ ಸಂಪರ್ಕ ಸುಲಭವಾಗಲಿದೆ. ಕೊಕ್ಕಡ, ಉಜಿರೆ ಮೂಲಕ ಚಾರ್ಮಾಡಿ ಭಾಗಕ್ಕೆ ತೆರಳುವವರಿಗೂ ಪ್ರಯೋಜನಕಾರಿಯಾಗಲಿದೆ. ಕಿಂಡಿ ಅಣೆಕಟ್ಟು ಕಾರಣದಿಂದ ಬೇಸಿಗೆಯಲ್ಲಿ ನೀರು ಸಂಗ್ರಹಗೊಂಡು ಸುಮಾರು 150 ಎಕ್ರೆ ಪ್ರದೇಶಕ್ಕೆ ನೀರಾವರಿ ಸಿಗಲಿದೆ. ಜತೆಗೆ ಅಂತರ್ಜಲ ಮಟ್ಟ ಏರಲಿದೆ.

Comments are closed.