Karnataka Band: ಮಾ. 22 ಕರ್ನಾಟಕ ಬಂದ್- ರದ್ದಾಗುತ್ತಾ SSLC ಪರೀಕ್ಷೆ ? ಶಿಕ್ಷಣ ಸಚಿವರು ಹೇಳಿದ್ದೇನು?

Share the Article

Karnataka Bandh: ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಹಾಗೂ ಕರ್ನಾಟಕ ಬಸ್ ಗಳು ಮತ್ತು ಸಿಬ್ಬಂದಿಗಳ ಮೇಲೆ ನಡೆಯುತ್ತಿರುವಂತಹ ನಿರಂತರ ದಬ್ಬಾಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಮಾರ್ಚ್ 22ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದಿಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳು ಈ ಬಂದ್ ಗೆ ಬೆಂಬಲ ಸೂಚಿಸಿವೆ.

ಆದರೆ, ಮಾರ್ಚ್ 21ರಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಗಳು ನಡೆಯಲಿದ್ದು, ಬಂದ್‌ ಬಿಸಿ ತಟ್ಟುವ ಸಾಧ್ಯತೆ ಇದ್ದು ಪರೀಕ್ಷೆಗಳು ರದ್ದಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಬಂದ್‌ ನಡೆದಿದ್ದೇ ಆದರೆ, ವಿದ್ಯಾರ್ಥಿಗಳ ಪರೀಕ್ಷೆ ಕಥೆ ಏನು? ಎಂಬ ಆತಂಕ ಕೂಡ ಇದೆ. ಈ ಎಲ್ಲದಕ್ಕೂ ಶಿಕ್ಷಣ ಸಚಿವರು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಶಿಕ್ಷಣ ಸಚಿವರು ಹೇಳಿದ್ದೇನು?
ಮಾರ್ಚ್‌ 22ರಂದು 7, 8 ಹಾಗೂ 9ನೇ ತರಗತಿ ಪರೀಕ್ಷೆಗಳ ದಿನಾಂಕ ಈಗಾಗಲೇ ನಿಗದಿಯಾಗಿದೆ. ಬಂದ್‌ ಎಂಬ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಒಂದು ವೇಳೆ ಬಂದ್‌ ಇದ್ದರೂ ಸಹ ಯಾವ ಪರೀಕ್ಷೆಗಳನ್ನೂ ಮುಂದೂಡುವ ಪ್ರಶ್ನೆಯೇ ಇಲ್ಲ. ಪರೀಕ್ಷೆಗಳು ಅದರ ಪಾಡಿಗೆ ಅದು ನಡೆಯಲಿವೆ. ನನ್ನ ಪ್ರಕಾರ ಮಕ್ಕಳಿಗೆ ತೊಂದರೆ ಆಗುತ್ತೆ ಎನ್ನುವುದಾದ್ರೆ ಯಾರೂ ಬಂದ್‌ಗೆ ಸಹಕಾರ ಕೊಡುವುದಿಲ್ಲ. ಹಾಗಾಗಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಹೋರಾಟಗಾರರು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಬಂದ್‌ ಮಾಡುತ್ತಾರೆ. ಮಕ್ಕಳ ಪರೀಕ್ಷೆಗೆ ಅವರು ಸಹಕಾರ ಕೊಡುತ್ತಾರೆ. ಹಾಗಾಗಿ ನಾನು ಎಲ್ಲ ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡುವುದು ನಿಮ್ಮ ಹಕ್ಕು, ತಪ್ಪಿಲ್ಲ. ಆದರೆ ಮಕ್ಕಳಿಗೆ ಪರೀಕ್ಷೆ ಎನ್ನುವುದು ಬಹಳ ಮುಖ್ಯ. ಅವರ ಭವಿಷ್ಯವೇ ಈ ಪರೀಕ್ಷೆಯಲ್ಲಿದೆ. ಹಾಗಾಗಿ ಅವರಿಗೆ ನೀವೆಲ್ಲ ಅಡ್ಡಿಪಡಿಸುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Comments are closed.