

Tiruvananthapuram: ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಸಾವಿಗೀಡಾಗಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.
ಮೊಹಮ್ಮದ್ ಶಹಬಾಸ್ ಮೃತಪಟ್ಟ ವಿದ್ಯಾರ್ಥಿ.
ಎಂಜೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈತ ಕಲಿಯುತ್ತಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಐದು ಮಂದಿ ವಿದ್ಯಾರ್ಥಿಗಳನ್ನು ಬಂಧನ ಮಾಡಲಾಗಿದೆ. ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ವಿವರ;
ಫೆ.23 ರಂದು ತಾಮರಸ್ಸೆರಿಯ ಟ್ಯೂಷನ್ ಸೆಂಟರ್‌ನಲ್ಲಿ ಬೀಳ್ಗೊಡುಗೆ ಸಮಾರಂಭ ನಡೆದಿದ್ದು, ಈ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾತಿನ ಸಮರ ವಿದ್ಯಾರ್ಥಿಗಳ ನಡುವೆ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಫೆ.27 ರಂದು ಟ್ಯೂಷನ್ ಸೆಂಟರ್ ಬಳಿ ವಿದ್ಯಾರ್ಥಿಗಳ ನಡುವೆ ಮತ್ತೆ ಜಗಳ ಪ್ರಾರಂಭವಾಗಿದ್ದು, ಈ ಗಲಾಟೆಯಲ್ಲಿ ಶಹಬಾಸ್ ತಲೆಗೆ ಏಟು ಬಿದ್ದಿದೆ. ಆದರೆ ಆತ ಆಸ್ಪತ್ರೆಗೆ ಹೋಗದೆ ಸ್ನೇಹಿತನ ಬೈಕ್‌ನಲ್ಲಿ ಮನೆಗೆ ತೆರಳಿದ್ದಾನೆ. ಆದರೆ ದಾರಿ ಮಧ್ಯೆ ಆತ ವಾಂತಿ ಮಾಡಿದ್ದು, ಆದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಸ್ನೇಹಿತನ ಮನೆಯಲ್ಲಿ ಮಲಗಿದ್ದವನಿಗೆ ಅಲ್ಲೇ ಪ್ರಜ್ಞೆ ತಪ್ಪಿದೆ. ಇದರಿಂದ ಗಾಬರಿಗೊಂಡ ಸ್ನೇಹಿತನ ಮನೆಯವರು ಕೂಡಲೇ ಆತನನ್ನು ಕೋಝಿಕ್ಕೋಡ್ ನಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಪರಿಶೀಲನೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್‌ನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ವೈದ್ಯರು ಪರಿಶೀಲಿಸಿದಾಗ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆತನನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಮುಂಜಾನೆ ಒಂದು ಗಂಟೆಯ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಹೊಂದಿದ್ದಾನೆ.













