ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ಪ್ರಚಲಿತ ಭಾರತ ಸತ್ಯ-ಮಿಥ್ಯ ರಾಷ್ಟ್ರೀಯ ವಿಚಾರ ಸಂಕಿರಣ ಹಿಂದೂ ಧಾರ್ಮಿಕತೆಯಿಂದ ಆರ್ಥಿಕತೆಗೆ ಕೊಡುಗೆ-ಅಣ್ಣಾಮಲೈ

Bantawala: ಗುಣಮಟ್ಟದ ಶಿಕ್ಷಣದ ಜೊತೆಗೆ ವೈಶಿಷ್ಟ್ಯಪೂರ್ಣ

ಜೀವನ ಶೈಲಿ, ಆರ್ಥಿಕತೆ, ಶ್ರೇಷ್ಠ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಭಾರತೀಯ ವಿಚಾರಧಾರೆ ಪ್ರಸಕ್ತ ಜಗತ್ತಿಗೆ ಮಾದರಿಯಾಗಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದರು.

ಇಲ್ಲಿನ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರಚಲಿತ ಭಾರತ: ಸತ್ಯ-ಮಿಥ್ಯ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಂಭಮೇಳ, ಅಯೋಧ್ಯೆ ಶ್ರೀರಾಮ ಮಂದಿರ, ತಿರುಪತಿ ದೇವಸ್ಥಾನ ಸಹಿತ ಇತರ ದೇವಸ್ಥಾನಗಳ ಆದಾಯದಿಂದ ದೇಶಕ್ಕೂ ತೆರಿಗೆ ರೂಪದ ಆದಾಯ ದೊರೆಯುತ್ತಿದ್ದು ಹಿಂದೂ ಸಮಾಜದ ಧಾರ್ಮಿಕತೆಯು ದೇಶದ ಆರ್ಥಿಕತೆಗೆ ಬಲುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಭಾರತೀಯರಂತೆ ಇಂದು ಅಮೆರಿಕವೂ ದೇಶ ಮೊದಲು ಎಂಬ ವಿಚಾರಕ್ಕೆ ಮುಂದಾಗಿದೆ. ವಿವಿಧ ಭಾಷೆ ಮತ್ತು ಧರ್ಮಗಳ ಜನರನ್ನು ಹೊಂದಿರುವ ಈ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಮೇಲೈಸುತ್ತಿದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದಲ್ಲಿ ಕಟ್ಟು ಕಥೆಗಳ ಮೂಲಕ ಜನರ ಹಾದಿ ತಪ್ಪಿಸುವ ಪ್ರಯತ್ನ ನಡೆದಿದ್ದು, ನೈಜ ಇತಿಹಾಸ ತಿಳಿಸುವ ಪ್ರಯತ್ನ ನಡೆಸುವ ಅನಿವಾರ್ಯತೆ ಎದುರಾಗಿದೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಇತಿಹಾಸ ಸಂಶೋಧಕ ವಿಕ್ರಮ್ ಸಂಪತ್ ಅವರು ‘ಕಲಿತ ಪಾಠಗಳು, ಅರಿಯದ ನೋಟಗಳು’, ಬೆಂಗಳೂರಿನ ವಕೀಲೆ ಕ್ಷಮಾ ನರಗುಂದ ಅವರು ‘ನರೇಟಿವ್ (ಕಥನ/ಆಖ್ಯಾನ) ಹಾಗೆಂದರೇನು…?’, ಕಾರ್ಕಳದ ವಾಗ್ನಿ ಶ್ರೀಕಾಂತ್ ಶೆಟ್ಟಿ ಅವರು ‘ಇಸ್ರೇಲ್ ನಾವರಿಯದ ಸತ್ಯಗಳು’ ಕುರಿತು ಮಾಹಿತಿ ನೀಡಿದರು. ಸಂಸ್ಥೆ ಸಂಚಾಲಕ ವಸಂತ ಮಾಧವ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸ್ವಾತಿಲಕ್ಷ್ಮಿ ವಂದಿಸಿ, ಪುನೀತಾ ಕಾರ್ಯಕ್ರಮ ನಿರೂಪಿಸಿದರು.
Comments are closed.