Puttur: ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರ ಚಿಕಿತ್ಸೆ ಎಡವಟ್ಟು: ವೈದ್ಯರ ವಿರುದ್ಧ ದೂರು ದಾಖಲು

Share the Article

Puttur: ಪುತ್ತೂರಿನ (Puttur) ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರ ಚಿಕಿತ್ಸೆ ಬಳಿಕ ಸರ್ಜಿಕಲ್‌ ಬಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟ ವೈದ್ಯರಿಂದ ಬಾಣಾಂತಿಯೋರ್ವರು ಸಾವು ಬದುಕಿನ ನಡುವೆ ಹೋರಾಡಿ ಘಟನೆ ನಡೆದಿದೆ.

ಆರ್ಯಾಪು ಗ್ರಾಮದ ಬಂಗಾರಡ್ಕದ ಶರಣ್ಯ ಲಕ್ಷ್ಮೀ ಎಂಬವರು 2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಅವರಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿ, ಡಿಸೆಂಬರ್ 2 ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿತ್ತು.

ಡಿಸ್ಚಾರ್ಜ್ ಆದ ಬಳಿಕ ಕಾಡಿತ್ತು ಪದೇ ಪದೇ ಆರೋಗ್ಯ ಸಮಸ್ಯೆ:

ಆದರೆ ಆಸ್ಪತ್ರೆಯಿಂದ ಮನೆಗೆ ಹೋದ ಬಳಿಕ ಮಹಿಳೆ ವಿಪರೀತ ಜ್ವರದಿಂದ ಬಳಲಿದ್ದರು. ಈ ಬಗ್ಗೆ ಮಹಿಳೆಯ ಕುಟುಂಬದವರು ಹೆರಿಗೆ ಮಾಡಿಸಿದ ವೈದ್ಯ ಡಾ ಅನಿಲ್ ಬಳಿ ವಿಚಾರಿಸಿದ್ದು, ಜ್ವರದ ಔಷಧಿ ನೀಡುವಂತೆ ವೈದ್ಯರು ಸೂಚಿಸಿದ್ದರು. ಅಷ್ಟಾಗಿಯೂ ಜ್ವರ ಕಡಿಮೆ ಆಗದಿದ್ದಾಗ ಮನೆಯವರು ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಹೆಮಟೋಮ್ ಆಗಿರಬಹುದು ಎಂದು ಹೇಳಿದ ವೈದ್ಯರು, ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ ಕಡಿಮೆಯಾಗುತ್ತದೆ ಎಂದು ಭರವಸೆ ನೀಡಿದ್ದರು.

ಇಷ್ಟೆಲ್ಲ ಔಷಧ ನೀಡಿದರೂ ಬಾಣಂತಿಯ ಸಮಸ್ಯೆ ಕಡಿಮೆಯೇ ಆಗದಿರುವುದರಿಂದ ಅಲ್ಪಾ ಸೌಂಡ್‌ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಈ ವೇಳೆ ಹತ್ತು ಸೆಂಟಿಮೀಟರ್ ಮಾಫ್ ಫಾರ್ಮೇಶನ್ ಆಗಿರುವುದು ಪತ್ತೆಯಾಗಿದೆ. ಬಳಿಕ ಬೇರೆ ಔಷಧಿ ನೀಡಿದ ನಂತರ ಜ್ವರ ಕಡಿಮೆಯಾಗಿತ್ತು. ಆದರೆ ನಂತರ ಸಂಧಿ ನೋವು ಕಾಡಿತ್ತು. ಇದಕ್ಕೆ ಆರ್ಥೋ ಸಮಸ್ಯೆ ಇರಬಹುದು ಎಂದು ವೈದ್ಯ ಅನಿಲ್‌ ಹೇಳಿದ್ದರು.

ಮಂಗಳೂರಿನ ನುರಿತ ವೈದ್ಯರ ಬಳಿ ಹೋದಾಗ ಗೊತ್ತಾಯ್ತು ಸತ್ಯ!

ಬಾಣಂತಿಯ ಕುಟುಂಬದವರು ಕೊನೆಗೆ ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದ್ದರು. ಅಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ವೈದ್ಯರಿಗೆ, ಮಾರ್ಚ್ ಫಾರ್ಮೇಶನ್ ಆಗಿರುವುದು ಕಂಡುಬಂದಿದ್ದು, ಪುತ್ತೂರಿನ ವೈದ್ಯರ ಬಳಿ ಪ್ರಶ್ನಿಸಿದ್ದರು. ನಂತರ ಸಿಟಿ ಸ್ಕ್ಯಾನ್ ಮಾಡಿದಾಗ ವರದಿಯಲ್ಲಿ ಹೊಟ್ಟೆ ಒಳಗಡೆ ಸರ್ಜಿಕಲ್ ಬಟ್ಟೆ ಬಿಟ್ಟಿರುವ ವಿಚಾರ ತಿಳಿದುಬಂದಿದೆ. ಅಷ್ಟರಲ್ಲಾಗಲೇ ಸಿಸೇರಿಯನ್ನಾಗಿ ಒಂದುವರೆ ತಿಂಗಳಾಗಿದ್ದರಿಂದ ಬಾಣಂತಿ ಆರೋಗ್ಯ ಸಮಸ್ಯೆ ತೀರಾ ಹದಗೆಟ್ಟಿದ್ದು, ಅಪಾಯದ ಸ್ಥಿತಿ ತಲುಪಿತ್ತು. ನಂತರ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿ ಸರ್ಜಿಕಲ್ ಬಟ್ಟೆಯ ಮುದ್ದೆಯನ್ನು ವೈದ್ಯರು ಹೊರತೆಗೆದಿದ್ದಾರೆ.

ವೈದ್ಯರ ವಿರುದ್ದ ಪ್ರಕರಣ ದಾಖಲು: 

ಇದೀಗ ನಿರ್ಲಕ್ಷ್ಯ ವಹಿಸಿದ ಡಾ ಅನಿಲ್‌ ವಿರುದ್ಧ ಬಾಣಂತಿಯ ಪತಿ ಗಗನ್ ದೀಪ್ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವೈದ್ಯರ ನಿರ್ಲಕ್ಷದಿಂದ ಭಾರಿ ಅನಾಹುತ ಆಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments are closed.