Karnataka Government : ಸಾರ್ವಜನಿಕರು ಕಚೇರಿಗೆ ಭೇಟಿ ಕೊಟ್ಟಾಗ ಅಧಿಕಾರಿಗಳು ಸಭೆ ನಡೆಸುವಂತಿಲ್ಲ – ಸರ್ಕಾರದಿಂದ ಖಡಕ್ ಆದೇಶ

Share the Article

Karnataka Government : ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ದೊಡ್ಡ ಸಮಸ್ಯೆ ಎಂದರೆ ಅಧಿಕಾರಿಗಳು ಜನಸಾಮಾನ್ಯರ ಕೈಗೆ ಸಿಗುವುದೇ ಇಲ್ಲ ಎಂಬುದು. ಯಾವುದೇ ಸಮಯಕ್ಕೆ ಹೋದರು ಕೂಡ ಈಗ ಟೈಮ್ ಇಲ್ಲ, ಮೀಟಿಂಗ್ ಇದೆ ಎಂಬ ಕುಂಟು ನೆಪವನ್ನು ನೀಡಿ ಅಧಿಕಾರಿಗಳು ಜನಸಾಮಾನ್ಯರಿಂದ ತಪ್ಪಿಸಿಕೊಳ್ಳುತ್ತಿದ್ದರು. ಅವರ ಅಹವಾಲುಗಳನ್ನು ಕೇಳದೆ ಯಾಮಾರಿಸುತ್ತಿದ್ದರು. ಅದರೀಗ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.

ಹೌದು, ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿದ್ದು, ಸಾರ್ವಜನಿಕರ ಭೇಟಿ ವೇಳೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಭೆಯನ್ನು ನಡೆಸುವಂತಿಲ್ಲ ಎಂಬುದಾಗಿ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಅಲ್ಲದೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇತರ ಕ್ಷೇತ್ರ ಅಧಿಕಾರಿಗಳು ಮಧ್ಯಾಹ್ನ 3.30 ಗಂಟೆಯಿಂದ 5.30 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಸಮಯವನ್ನು ಕಲ್ಪಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಎಲ್ಲಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಪ್ರತಿ ದಿನ (ಸಾರ್ವಜನಿಕ ರಜೆ ಹೊರತುಪಡಿಸಿ) ಮಧ್ಯಾಹ್ನ 3.30 ಗಂಟೆಯಿಂದ 5.00 ಗಂಟೆಯವರೆಗೆ ಯಾವುದೇ ಸಭೆಗಳನ್ನು ನಿಗದಿಪಡಿಸದ (ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ) ಸಾರ್ವಜನಿಕರನ್ನು ಭೇಟಿ ಮಾಡುವುದು ಹಾಗೂ ಅವರ ಕುಂದುಕೊರತೆಗಳನ್ನು ಜನಸಂದನಾ ತಂತ್ರಾಂಶದಲ್ಲಿ ದಾಖಲಿಸಿ ಹಾಗೂ ನಿವಾರಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

Comments are closed.