Mangaluru: ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನ-ಮಾನ ನೀಡುವಂತೆ ಕ್ಯಾ. ಚೌಟ ಆಗ್ರಹ!

Mangaluru: ಮಡಿಕೇರಿಯಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರ ಬಾಲಕನ ಎದೆಗೂಡಿನ ಭಾಗಕ್ಕೆ ಚುಚ್ಚಿಕೊಂಡಿದ್ದ ತೆಂಗಿನ ದಿಂಡು ಹಾಗೂ ಲೋಹದ ಸರವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಾಣ ಉಳಿಸಿದ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘಿಸಿದ್ದಾರೆ. ಅದಲ್ಲದೆ ಮುಂದಿನ ರಾಜ್ಯ ಬಜೆಟ್ನಲ್ಲಿ ವೆಸ್ಲಾಕ್ ನ್ನು ಪ್ರಾದೇಶಿಕ (ರಿಜನಲ್) ಆಸ್ಪತ್ರೆಯನ್ನಾಗಿ ಘೋಷಿಸಬೇಕು ಎಂದು ದ.ಕ. ಸಂಸದ ಬೃಜೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಹೌದು, ಮುಂದಿನ ದಿನಗಳಲ್ಲಿ ವೆನ್ಲಾಕ್ನಲ್ಲಿ ಮತ್ತಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಮಾದರಿ ಆಸ್ಪತ್ರೆಯಾಗಿ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ವೆನ್ಲಾಕ್ಗೆ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ ಸುತ್ತಮುತ್ತಲಿನ ಸುಮಾರು 7-8 ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಅವಲಂಬಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿ ಕೊರತೆ ಸಹಿತ ಕೆಲವು ಸಮಸ್ಯೆಯನ್ನು ಈ ಜಿಲ್ಲಾಸ್ಪತ್ರೆ ಎದುರಿಸುತ್ತಿದ್ದು ಇವುಗಳನ್ನು ನೀವಾರಿಸಬೇಕು. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ಬಜೆಟ್ನಲ್ಲಿ ವೆನ್ಲಾಕ್ ನ್ನು ಪ್ರಾದೇಶಿಕ(ರಿಜನಲ್) ಆಸ್ಪತ್ರೆಯನ್ನಾಗಿ ಘೋಷಿಸಬೇಕು. ಜೊತೆಗೆ ಆಸ್ಪತ್ರೆಗೆ ಮತ್ತಷ್ಟು ಉನ್ನತ ಸ್ಥಾನಮಾನ ಒದಗಿಸಬೇಕು. ಪ್ರಾದೇಶಿಕ ಆಸ್ಪತ್ರೆ ಮಾನ್ಯತೆ ನೀಡುವುದರಿಂದ ಹೆಚ್ಚಿನ ಅನುದಾನ, ವೈದ್ಯಕೀಯ ಮೂಲಸೌಕರ್ಯ ಸುಧಾರಿಸುವ ಮೂಲಕ ಹೆಚ್ಚಿನ ಪ್ರದೇಶಕ್ಕೆ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುತ್ತದೆ. ಈ ಸಂಬಂಧ ಕ್ಯಾ. ಚೌಟ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಕೂಡ ಬರೆದು ಒತ್ತಾಯಿಸಿದ್ದಾರೆ.
Comments are closed.