Naxalite: ನಕ್ಸಲೆಟ್ಸ್ ಶಸ್ತ್ರಾಸ್ತ್ರ ಇಲ್ಲದೆ ಶರಣಾಗತಿ ಆಗಿದ್ದೇಕೆ? ಇಲ್ಲಿದೆ ನೋಡಿ ಕುತೂಹಲದ ವಿಚಾರ

Naxalite: ಶರಣಾಗತಿ ಆದ ಆರು ಮಂದಿ ನಕ್ಸಲೆಟ್ ಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಮುಚ್ಚಿಟ್ಟಿದ್ದರು. ಬಳಿಕ ಅವು ಎಲ್ಲಿವೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಶೋಧ ಕಾರ್ಯ ಆರಂಭವಾಗಿದೆ. ಆದರೆ ಈ ನಕ್ಸಲೆಟ್ ಗಳು ಶಸ್ತ್ರಾಸ್ತ್ರ ಇಲ್ಲದೆ ಶರಣಾಗತಿ ಆಗಿದ್ದು ಏಕೆ? ಇಲ್ಲಿದೆ ನೋಡಿ ಮಾಹಿತಿ

 

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿಯಲ್ಲಿ ಶಸ್ತ್ರಾಸ್ತ್ರ ಸಮೇತ ಶರಣಾಗತಿ ಭದ್ರತಾ ದೃಷ್ಟಿಯಿಂದ ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳ ಕಚೇರಿಗೆ ಸಶಸ್ತ್ರಧಾರಿಗಳಾಗಿ ಖಾಸಗಿ ವ್ಯಕ್ತಿಗಳು ಬಂದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹಿರಿಯ ಅಧಿಕಾರಿಗಳ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಶರಣಾದ ನಕ್ಸಲರ ಮೇಲೆ ಕೊಲೆ ಹಾಗೂ ಯುಎಪಿಎ ಅಡಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ತಾವು ಬಳಸಿದ್ದ ಶಸ್ತ್ರಗಳನ್ನು ಒಪ್ಪಿಸಿದರೆ ಮುಂದೆ ತನಿಖೆ ಎದುರಿಸಬೇಕಾಗಬಹುದು ಎಂಬ ಆತಂಕ ಅವರಲ್ಲಿತ್ತು. ಅಲ್ಲದೆ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರೆ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಸಂಗ್ರಹ ಕಾಯ್ದೆ (ಆರ್ಮ್ಸ್ ಆಕ್ಟ್‌) ಅಡಿ ದಾಖಲಾಗಿರುವ ಪ್ರಕರಣಗಳಿಗೆ ಪ್ರಮುಖ ಸಾಕ್ಷ್ಯಗಳು ಸಿಗಲಿವೆ.

ಹೀಗಾಗಿದ್ದಲ್ಲಿ ಭವಿಷ್ಯದಲ್ಲಿ ತಮಗೆ ಕಾನೂನು ಕುಣಿಕೆ ಬಿಗಿಯಾಗಲು ಶಸ್ತ್ರಾಸ್ತ್ರಗಳ ಹಸ್ತಾಂತರ ಭಾವಚಿತ್ರಗಳು, ವಿಡಿಯೋಗಳೇ ಮುಳ್ಳಾಗಬಹುದು. ಬೇರೆಲ್ಲ ಪ್ರಕರಣಗಳು ಮಾಫಿಯಾದರೂ ಆರ್ಮ್ಸ್‌ ಆಕ್ಟ್‌ನಲ್ಲಿ 10 ವರ್ಷ ಶಿಕ್ಷೆಗೆ ಗುರಿಯಾಗುವ ಭೀತಿ ಅವರಲ್ಲಿ ಇತ್ತು. ಹೀಗಾಗಿ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಮುಚ್ಚಿಟ್ಟು, ಶರಣಾಗತಿಯಾಗಿ, ಇದೀಗ ಅವುಗಳ ಕುರಿತು ಮಾಹಿತಿ ನೀಡಿದ್ದಾರೆ.

ಎಲ್ಲಿವೆ ಶಸ್ತ್ರಾಸ್ತ್ರಗಳು?
ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ. ಈ ನಕ್ಸಲರ ಬಳಿ ಪಿಸ್ತೂಲ್ ಮಾತ್ರವಲ್ಲದೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅವು ಯಾವ ಮಾದರಿಯವು ಎಂಬುದು ಮಹಜರ್‌ ನಂತರವೇ ಖಚಿತವಾಗಲಿದೆ.

Comments are closed, but trackbacks and pingbacks are open.