Mangaluru :ಸಾಲ ತೀರಿಸಲಾಗದೆ ಅಂಗವಿಕಲ ವ್ಯಕ್ತಿ ಆತ್ಮಹತ್ಯೆ ಪ್ರಕರಣ – ಬಂಧನಕ್ಕೊಳಗಾದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಆಸ್ಪತ್ರೆಗೆ ದಾಖಲು!!

Mangaluru : ಸಾಲ ಮರು ಪಾವತಿಸಲಾಗದೆ 47 ವರ್ಷದ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (MCC) ಬ್ಯಾಂಕ್ ಮುಖ್ಯಸ್ಥ ಅನಿಲ್ ಲೊಬೊ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದರು. ಅದರೀಗ ಅನಿಲ್ ಲೋಬೊರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಶಿಫಾರಸು ಮಾಡಿದೆ.

ಮಂಗಳೂರು(Mangaluru) ಹೊರವಲಯದ ಪೆರ್ಮಾಯಿ ಎಂಬಲ್ಲಿ ಉಳಾಯಿ ಬೆಟ್ಟು ನಿವಾಸಿ ಅಂಗ ವೈಕಲ್ಯ ಹೊಂದಿದ ಮನೋಹರ್ ಪಿರೇರಾ (47) ಅವರು ಸಾಲ ಮರುಪಾವತಿ ವಿಚಾರದಲ್ಲಿ ಕಿರುಕುಳ ನೀಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂದು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್‌ (ಎಂಸಿಸಿ ಬ್ಯಾಂಕ್‌) ಅಧ್ಯಕ್ಷನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೋಹರ್ ಆತ್ಮಹತ್ಯೆಗೆ ಸಂಬಂಧಿಸಿ, ಅವರ ಸಹೋದರ ಜೀವನ್‌ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಬ್ಯಾಂಕ್ ಅಧ್ಯಕ್ಷನನ್ನು ಬಂಧಿಸಿದ್ದರು. ಬುಧವಾರ ಅನಿಲ್ ಲೋಬೊನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆದರೆ ಅನಿಲ್ ಲೋಬೊರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?
ಸಂತ್ರಸ್ತ ಪೆರ್ಮಾಯಿಯ ಮನೋಹರ್ ಪಿರೇರಾ ಅವರು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮನೆಗಾಗಿ 15 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 9 ಲಕ್ಷ ರೂಪಾಯಿ ಸಾಲ ತೀರಿಸಿದ್ದಾಗಿ ವಿಡಿಯೋ ಹೇಳಿಕೆಯಲ್ಲಿ ಹೇಳಿಕೊಂಡಿರುವ ಮನೋಹರ್ ಪಿರೇರಾ, ಕೋವಿಡ್ ಸಂಕಷ್ಟದ ವೇಳೆ ಸಾಲ ಮರುಪಾವತಿ ಮಾಡಿರಲಿಲ್ಲ. ಎರಡು ವರ್ಷ ಹಿಂದೆ ಮನೆ ಜಪ್ತಿಗೆ ಬಂದಾಗ ಚಾರಿಟಿ ಸಂಸ್ಥೆಯಿಂದ ನೆರವು ಪಡೆದು ಸೆಲ್ಫ್ ಚೆಕ್ ಮೂಲಕ 15 ಲಕ್ಷ ರೂಪಾಯಿ ಪಾವತಿಸಿದ್ದೇನೆ ಎಂದಿದ್ದಾರೆ. ಆದರೆ ಆ ಹಣವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೆ ಮನೆ ಜಪ್ತಿ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ಯಾರಾಲಿಸಿಸ್‌ಗೆ ಒಳಗಾಗಿ ಕಾಲು ಊನಗೊಂಡಿದ್ದ ಮನೋಹರ್ ಕೆಲಸಕ್ಕೆ ಹೋಗುತ್ತಿಲ್ಲ. ಆದಾಯ ಇಲ್ಲದ ಕಾರಣ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಅನಿಲ್ ಲೋಬೋ ಅವರ ಬೆದರಿಕೆಗಳಿಂದ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ಅವರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Leave A Reply

Your email address will not be published.