Parliament Winter Session: ಗಾಯಗೊಂಡ ಪ್ರತಾಪ್ ಸಾರಂಗಿಯನ್ನು ನೋಡಲು ಬಂದ ರಾಹುಲ್ ಗಾಂಧಿ, ಬಿಜೆಪಿ ಸಂಸದರಿಂದ ತೀವ್ರ ತರಾಟೆ; ವಿಡಿಯೋ ವೈರಲ್‌

Parliament Winter Session: ಸಂಸತ್ತಿನ ಸಂಕೀರ್ಣದಲ್ಲಿ ಗಲಾಟೆ ಆರೋಪದ ನಡುವೆ ದೇಶದ ರಾಜಕೀಯ ಬಿಸಿಯಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಇಬ್ಬರು ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಅವರನ್ನು ತಳ್ಳಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ. ಇಬ್ಬರೂ ಸಂಸದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಬಿಜೆಪಿ ಸಂಸದರು ಮಕರ ದ್ವಾರದಲ್ಲಿ ತಮ್ಮನ್ನು ತಡೆದು ಹಲ್ಲೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನೀವು ಗೂಂಡಾಗಿರಿ ಮಾಡುತ್ತಿದ್ದೀರಿ- ನಿಶಿಕಾಂತ್ ದುಬೆ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ರಾಹುಲ್ ಗಾಂಧಿ ಗಾಯಗೊಂಡವರನ್ನು ನೋಡಲು ಹೋಗುತ್ತಿರುವುದು ಕಂಡು ಬಂದಿದೆ. ಮಾತಿನ ಚಕಮಕಿ ನಂತರ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅಲ್ಲಿ ಕುಳಿತಿದ್ದರು. ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ ಸ್ಥಳದಿಂದ ಹಾದು ಹೋಗುತ್ತಿದ್ದರು. ಪ್ರತಾಪ್ ಸಾರಂಗಿಯನ್ನು ನೋಡಿದ ರಾಹುಲ್ ಗಾಂಧಿ ಸ್ವಲ್ಪ ಹೊತ್ತು ನಿಂತರು. ಆಗ ಅಲ್ಲಿದ್ದ ನಿಶಿಕಾಂತ್ ದುಬೆ ಸೇರಿದಂತೆ ಎಲ್ಲ ಬಿಜೆಪಿ ಸಂಸದರು ರಾಹುಲ್‌ ಗಾಂಧಿಗೆ ಗೂಂಡಾಗಿರಿ ಮಾಡುತ್ತಿದ್ದೀರಿ. ವೃದ್ಧನನ್ನು ಕೆಳಗೆ ತಳ್ಳಿದ್ದೀರಿ ಎಂದು ಹೇಳುತ್ತಿದ್ದಾರೆ.

ಸಾರಂಗಿ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದು ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಜೆಪಿ ಸಂಸದರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಮಹಿಳಾ ಸಂಸದರನ್ನು ಬಿಜೆಪಿ ಸದಸ್ಯರು ಸಂಸತ್ತಿನ ಸಂಕೀರ್ಣದಲ್ಲಿ ದೌರ್ಜನ್ಯ ಎಸಗಿರುವುದು ಬಿಜೆಪಿಯ ಸರ್ವಾಧಿಕಾರವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿಡಿಯೋ ಬಿಡುಗಡೆ ಮಾಡಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೇಳಿಕೆಗಾಗಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದ್ದು, ಭಾರತೀಯ ಜನತಾ ಪಕ್ಷದ ಸದಸ್ಯರು ವಿರೋಧ ಪಕ್ಷವು ಸಂವಿಧಾನದ ಸೃಷ್ಟಿಕರ್ತನನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.