B S Yadiyurappa : ಪೋಕ್ಸೋ ಪ್ರಕರಣ- ‘ಬಾಲಕಿಯ ಶರ್ಟ್ ಒಳಗೆ ಕೈ ಹಾಕಿದ್ದಾಗಿ ಒಪ್ಪಿಕೊಂಡ್ರಾ ಯಡಿಯೂರಪ್ಪ?
B S Yadiyurappa : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಈ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪನವರು(B S Yadiyurappa ) ಅರ್ಜಿ ಸಲ್ಲಿಸಿದ್ದು, ಕೋರ್ಟಿನಲ್ಲಿ ವಾದ ಪ್ರತಿವಾದಗಳು ನಡೆದಿವೆ. ಈ ವೇಳೆ ವಿಶೇಷ ಪ್ರಾಸಿಕ್ಯೂಟರ್ ಆದ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಚ್ಚರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಹೌದು, ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ ವಿಚಾರಣೆ ನಡೆಸಿದರು. ಈ ವೇಳೆ ವಿಶೇಷ ಪ್ರಾಸಿಕ್ಯೂಟರ್ ಆದ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ಅವರು ಬಾಲಕಿಯ ಶರ್ಟ್ ಒಳಗೆ ಯಡಿಯೂರಪ್ಪನವರೇ ಕೈ ಹಾಕಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ವಕೀಲ ರವಿವರ್ಮ ಕುಮಾರ್ ಹೇಳಿದ್ದೇನು?
ರೇಪ್ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಶರ್ಟ್ ಒಳಕೆ ಕೈ ಹಾಕಿದ್ದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ’ ಎಂದು ಪ್ರಶ್ನಿಸಿದ ರವಿವರ್ಮಕುಮಾರ್ ‘ಲೈಂಗಿಕ ದೌರ್ಜನ್ಯ ನಡೆದಿರುವುದು ಸುಸ್ಪಷ್ಟ, ಹಾಗಾಗಿ, ಪ್ರಕರಣ ರದ್ದುಪಡಿಸುವಂತೆ ಕೋರಿರುವ ಯಡಿಯೂರಪ್ಪನವರ ಅರ್ಜಿ ವಜಾಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಯಡಿಯೂರಪ್ಪ ಪರ ವಕೀಲರು ಹೇಳಿದ್ದೇನು?
ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರಿಗೆ 82 ವರ್ಷ ವಯಸ್ಸಾಗಿದೆ. ಅವರ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತ ಬಾಲಕಿಯ ದೂರುದಾರ ತಾಯಿಯ ನಡವಳಿಕೆಯನ್ನು ಗಮನಿಸಬೇಕು. ಅಧಿಕಾರಿಗಳು, ಸಂಬಂಧಿಗಳು, ರಾಜಕಾರಣಿಗಳ ಮೇಲೆ ಸುಮಾರು 56 ದೂರು ನೀಡಿದ್ದಾರೆ. ಘಟನೆ ನಡೆದ ಒಂದೂವರೆ ತಿಂಗಳ ನಂತರ ಮಾರ್ಚ್ 14ರಂದು ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ದಾಖಲಿಸಲಾಗಿದೆ. ಅರ್ಜಿದಾರರು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ಬಾಲಕಿ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ಹಲವು ಜನರಿದ್ದು ಅವರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಲ್ಲದೆ ಆರೋಪಪಟ್ಟಿಯಲ್ಲಿನ ಸಾಕ್ಷಿಗಳು ನೀಡಿರುವ ಹೇಳಿಕೆಗಳಂತೆ, ಅರ್ಜಿದಾರರಿಗೆ ಕೈ ನಡುಗುತ್ತದೆ. ಲೈಟ್ ಸ್ವಿಚ್ ಹಾಕಲೂ ಅವರು ಇತರರಿಗೆ ಹೇಳುತ್ತಾರೆ. ದೂರುದಾರ ಮಹಿಳೆ, ಮಗಳೊಂದಿಗೆ ರೂಮಿಗೆ ಹೋಗಿರಲಿಲ್ಲವೆಂದು ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಅರ್ಜಿದಾರರ ಸುತ್ತಮುತ್ತಲೇ ಇರುತ್ತಾರೆ ಎಂದು ಪೀಠಕ್ಕೆ ವಿವರಿಸಿದರು.