Drone Pratap: ಕೃಷಿ ಹೊಂಡದಲ್ಲಿ ಸ್ಫೋಟ; ಡ್ರೋನ್ ಪ್ರತಾಪ್ಗೆ 10 ದಿನದ ನ್ಯಾಯಾಂಗ ಬಂಧನ, ಮುಖ್ಯಮಂತ್ರಿಗಳ ಕಚೇರಿಯಿಂದ ಮಹತ್ವದ ಸೂಚನೆ
Drone Pratap: ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟ ಮಾಡಿದ್ದರ ಕುರಿತು ಸಂಪೂರ್ಣ ವರದಿಯನ್ನು ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಕಾರಣದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಸೋಡಿಯಂ ಸ್ಫೋಟಗೊಂಡ ಜನಕಲೋಟಿ ಬಳಿಯ ಕೃಷಿ ಹೊಂಡಕ್ಕೆ ಹೋಗಿದ್ದು, ನೀರು, ಸ್ಥಳದಲ್ಲಿದ್ದ ಕೆಮಿಕಲ್ ಸ್ಯಾಂಪಲ್ ಸಂಗ್ರಹ ಮಾಡಿ ಲ್ಯಾಬ್‌ಗೆ ಕಳುಹಿಸಿದ್ದಾರೆ.
ಅನುಮತಿ ಇಲ್ಲದೆ ಡ್ರೋನ್ ಪ್ರತಾಪ್ ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಇರುವ ಕೃಷಿ ಹೊಂಡದಲ್ಲಿ ಸೋಡಿಯಂ ಎಸೆದು ಸ್ಫೋಟ ಮಾಡಿದ್ದರು. ಹೀಗಾಗಿ ಈ ಆರೋಪದ ಮೇರೆಗೆ ಡ್ರೋನ್ ಪ್ರತಾಪ್ ಅವರನ್ನು ಡಿ.12(ಗುರುವಾರ) ಬಂಧನ ಮಾಡಿದ್ದು ಡಿ.13 ರಂದು ಮಧುಗಿರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಪ್ರತಾಪ್‌ನನ್ನು ನೀಡಿತ್ತು. ಇಂದು ಸೋಮವಾರ (ಡಿ.16) ಕ್ಕೆ ಕಸ್ಟಡಿ ಅಂತ್ಯವಾಗಿದ್ದು, ನ್ಯಾಯಾಲಯದ ಮುಂದೆ ಡ್ರೋನ್ ಪ್ರತಾಪ್‌ನನ್ನು ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯವು ಡ್ರೋನ್ ಪ್ರತಾಪ್ ಗೆ 10 ದಿನದ ನ್ಯಾಯಾಂಗ ಬಂಧನ ವಿಧಿಸಿದೆ.
ಬಿಎನ್‌ಎಸ್ ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3 ರ ಅಡಿಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.