Wallmart: ಚಡ್ಡಿ, ಬಿಕಿನಿ, ಚಪ್ಪಲಿ ಮೇಲೆ ಹಿಂದೂ ದೇವರ ಚಿತ್ರ: ವಾಲ್‌ಮಾರ್ಟ್‌ಗೆ ತಕ್ಕ ಶಾಸ್ತಿ ಮಾಡಿದ ಹಿಂದೂಗಳು

Wallmart: ರಿಟೇಲ್ ಮಾರುಕಟ್ಟೆಯ ಅತಿದೊಡ್ಡ ಸಂಸ್ಥೆ ವಾಲ್‌ಮಾರ್ಟ್ (Wallmart) ಇದೀಗ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದೆ. ಹಿಂದೂ ದೇವರಾದ ಗಣೇಶನ ಭಾವಚಿತ್ರವಿರುವ ಬಿಕಿನಿ, ಚಪ್ಪಲಿ, ಚಡ್ಡಿ ಸೇರಿದಂತೆ ತರಹೇವಾರಿ ಒಳಒಡುಪುಗಳು ಹಾಗೂ ಚಪ್ಪಲಿಗಳನ್ನು ಆನ್‌ಲೈನ್‌ನಲ್ಲಿ ವಾಲ್‌ಮಾರ್ಟ್ ಮಾರಾಟಕ್ಕೆ ಇಟ್ಟಿತ್ತು.
ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪರಿಣಾಮ ಹಲವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ವಾಲ್‌ಮಾರ್ಟ್ ವಿರುದ್ಧ ಹಿಂದೂಗಳು ತಿರುಗಿಬಿದ್ದಿದ್ದಾರೆ.

ಮುಖ್ಯವಾಗಿ ವಾಲ್‌ಮಾರ್ಟ್ ಮಾರಾಟ ಮಾಡುತ್ತಿರುವ ಚಪ್ಪಲಿಗಳು ಮತ್ತು ಒಳ ಉಡುಪುಗಳ ಮೇಲೆ ಪೂಜ್ಯ ಹಿಂದೂ ದೇವರಾದ ಗಣೇಶನನ್ನು ಚಿತ್ರಿಸಲಾಗಿದೆ. ಈ ಬಗ್ಗೆ ಹಿಂದೂ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ವಾಲ್‌ಮಾರ್ಟ್‌ನ ಸಂಪೂರ್ಣ ನಿರ್ಲಕ್ಷ್ಯ ಹಾಗೂ ಹಿಂದೂ ದೇವರುಗಳು, ಹಿಂದೂ ಭಾವನೆಗಳ ಮೇಲಿನ ಅಗೌರವಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.
ಇನ್ನು ವಾಲ್‌ಮಾರ್ಟ್ ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ಮಾರಾಟ ಮಾಡುತ್ತಿದ್ದು ಇದರ ವಿರುದ್ಧ ಅಮೇರಿಕಾದಲ್ಲಿ ಹಿಂದೂಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಬಾಯ್ಕಾಟ್ ವಾಲ್‌ಮಾರ್ಟ್ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದಾರೆ.
ಜಾಗತಿಕವಾಗಿ ಈ ವಸ್ತುಗಳ ವಿರುದ್ಧ ಖಂಡನೆ ವ್ಯಕ್ತವಾದ ಬೆನ್ನಲ್ಲೇ ವಾಲ್‌ಮಾರ್ಟ್ ಯೂಟರ್ನ್ ಹೊಡೆದಿದೆ. ತನ್ನ ವೆಬ್‌ಸೈಟ್‌ನಿಂದ ಗಣೇಶನ ಚಿತ್ರವಿದ್ದ ಈ ಚಪ್ಪಲಿ, ಬಿಕಿನಿ, ಚಡ್ಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಹಾಕಿರುವುದಾಗಿ ತಿಳಿಸಿದೆ. ಈ ಅಚಾತುರ್ಯಕ್ಕೆ ಕ್ಷಮೆಯನ್ನೂ ಕೇಳಿದೆ ಎಂದು ವರದಿಯಾಗಿದೆ.
ಹೌದು, ಹಿಂದೂ ಜಾಗೃತಿ ಸಂಘಟನೆಯು ಅತ್ಯಂತ ಪೂಜ್ಯ ಹಿಂದೂ ದೇವರಾದ ಶ್ರೀ ಗಣೇಶನನ್ನು ಒಳ ಉಡುಪುಗಳು, ಬಾಕ್ಸರ್‌ಗಳು, ಸಾಕ್ಸ್, ಚಪ್ಪಲಿಗಳು ಇತ್ಯಾದಿಗಳ ಮೇಲೆ ಚಿತ್ರಿಸುವುದು ಪ್ರಪಂಚದಾದ್ಯಂತದ ಹಿಂದೂಗಳಿಗೆ ತೋರಿರುವ ಅಗೌರವ ಎಂದು ಖಂಡಿಸಿತ್ತು. ಇನ್ನು ಈ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬಂದ ಹಿನ್ನೆಲೆ ವಾಲ್‌ಮಾರ್ಟ್ ಕ್ಷಮೆಯಾಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.