Ullala: ಗ್ಯಾಸ್‌ ಸೋರಿಕೆಯಾಗಿ ತೀವ್ರ ಸ್ಫೋಟ; ತಾಯಿ, ಮಕ್ಕಳು ಗಂಭೀರ, ಮನೆಗೆ ತೀವ್ರ ಹಾನಿ

Ullala: ಮಂಜನಾಡಿ ಗ್ರಾಮದ ಕಂಡಿಕ ಎಂಬಲ್ಲಿ ಗ್ಯಾಸ್‌ ಸೋರಿಕೆಯುಂಟಾಗಿ ತಾಯಿ ಮತ್ತು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ.

ಡಿ.7 ರ (ಶನಿವಾರ) ತಡರಾತ್ರಿ ಸ್ಫೋಟಗೊಂಡಿರುವ ಕುರಿತು ವರದಿಯಾಗಿದೆ.

ಗಾಯಗೊಂಡವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್‌ ಬಿನ್‌ ಇಸ್ಮಾಯಿಲ್‌ ಎಂಬುವವರ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿದೆ. ಇವರ ಪತ್ನಿ ಕುಬ್ರ (40), ಮೆಹದಿ (15), ಮಝಿಹಾ (13), ಮಾಯಿಝಾ (11) ಗಂಭೀರ ಗಾಯಗೊಂಡಿದ್ದಾರೆ.

ಮುತ್ತಲಿಬ್‌ ಅವರು ವಿದೇಶದಲ್ಲಿದ್ದು, ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಇದ್ದರು.

ಡಿ.7 (ಶನಿವಾರ) ರ ರಾತ್ರಿ ಕುಬ್ರ ಮತ್ತು ಮಕ್ಕಳು ತಡರಾತ್ರಿ ಊಟ ಮಾಡಿ ಮಲಗಿದ್ದಾರೆ. ತಡರಾತ್ರಿ ಕುಬ್ರ ಅವರು ಶೌಚಾಲಯಕ್ಕೆಂದು ಹೋಗಲು ಸ್ವಿಚ್‌ ಹಾಕಿದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಎಷ್ಟಿತ್ತೆಂದರೆ ಬೆಡ್‌ರೂಂ ಸಹಿತ ಅಡುಗೆ ಕೋಣೆಯ ಶೀಟ್‌ ಹಾಕಿದ್ದ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿತ್ತು.

ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್‌ಗೆ ಯಾವುದೇ ಹಾನಿಯಾಗಿಲ್ಲ. ಬೆಡ್‌ ರೂಂ ಬಳಿಯಿದ್ದ ಸಿಲಿಂಡರ್‌ ಸೋರಿಕೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಕೊಣಾಜೆ ಪೊಲೀಸರು, ತಹಶೀಲ್ದಾರ್‌ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್‌ ಭೇಟಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಮನೆಗೆ ತೀವ್ರ ಹಾನಿಯಾಗಿದೆ.

Leave A Reply

Your email address will not be published.