BJP: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ, ಬಿಜೆಪಿಯ ಈ ಇಬ್ಬರು ಶಾಸಕರಿಗೆ ಪಕ್ಷದಿಂದ ಗೇಟ್ ಪಾಸ್!!
BJP: ಶನಿವಾರ ಸಭೆ ಸೇರಿದ್ದ ಬಿಜೆಪಿ (BJP) ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮತ್ತು ಅನರ್ಹಗೊಳಿಸುವ ಸಂಬಂಧ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ನಿರ್ಧರಿಸಿದೆ.
ಹೌದು, ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಕಳೆದ ಹಲವು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರುಗಳು ಕಾಂಗ್ರೆಸ್ ಜೊತೆ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ಶಾಸಕರ ವಿಚಾರವನ್ನು ಬಹಳ ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಬ್ರೇಕ್ ಹಾಕಲು ಹಾಗೂ ಬಿಗಿ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ನಿರ್ಧಾರಿಸಿದ್ದು ಈ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
ಇನ್ನು ಹಲವು ತಿಂಗಳಿಂದ ಪಕ್ಷದ ಕೆಲ ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್‌ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂತೆಯೆ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.