DK Shivkumar : ‘ಸಾಯುವವರೆಗೂ ಸಿದ್ದರಾಮಯ್ಯನ ಬೆನ್ನಿಗೆ ಬಂಡೆಯಂತೆ ಬೆನ್ನೆಲುಬಾಗಿರುತ್ತೇನೆ’ – ಹಾಸನ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಘೋಷಣೆ

DK Shivkumar : ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಪಟ್ಟ ಹಂಚಿಕೆ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ‘ನಾನು ಸಾಯೋವರೆಗೆ ಸಿದ್ದರಾಮಯ್ಯ ಜೊತೆಗೆ ಇರುತ್ತೇನೆ, ಅವರಿಗೆ ಬಂಡೆಯಾಗಿ ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಹೌದು, ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು’ ಈ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯ’ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ‘ಇದು ಕೇವಲ ಜನಕಲ್ಯಾಣ ಸಮಾವೇಶ ಮಾತ್ರ ಅಲ್ಲ. ಇದು ಗ್ಯಾರಂಟಿಗಳ, ಗೆಲುವಿನ, ನಂಬಿಕೆಯ ಸಮಾವೇಶ. ಬಿಜೆಪಿಯ (BJP) ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಮೂರು ಉಪ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ನಾವು ಯಾವತ್ತೂ ಭಾವನೆ, ಧರ್ಮದ ಮೇಲೆ ರಾಜಕಾರಣ ‌ಮಾಡಲ್ಲ. ಬದುಕಿನ ಮೇಲೆ ರಾಜಕಾರಣ ಮಾಡ್ತೀವಿ. ನಾವು ಮಾಡುತ್ತಿರುವ ಈ ಅಧಿಕಾರ ನಶ್ವರ, ಕಾಂಗ್ರೆಸ್‌ ಪಕ್ಷದ ಸಾಧನೆ, ನಮ್ಮ ಸಾಧನೆ’ ಎಂದಿಗೂ ಅಜರಾಮರ ಎಂದು ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನ ಬಣ್ಣಿಸಿದರು.

Leave A Reply

Your email address will not be published.