Tragedy at Pushpa 2 premiere: ಪುಷ್ಪ 2 ಸ್ಕ್ರೀನಿಂಗ್‌ ವೇಳೆ ಭಾರೀ ಕಾಲ್ತುಳಿತ; ಮಹಿಳೆ ಸಾವು, ಮಗ ಗಂಭೀರ

Tragedy at Pushpa 2 premiere: ಬುಧವಾರ (ಡಿ.4) ತಡರಾತ್ರಿ ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರೋಡ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ಅವರ ಚಲನಚಿತ್ರ ಪುಷ್ಪ 2: ದಿ ರೂಲ್‌ನ ಮಧ್ಯರಾತ್ರಿ ಪ್ರೀಮಿಯರ್‌ನಲ್ಲಿ ದುರಂತ ಸಂಭವಿಸಿದೆ. ಅಲ್ಲು ಅರ್ಜುನ್ ಥಿಯೇಟರ್‌ಗೆ ಆಗಮಿಸಿದ ನಂತರ ಉಂಟಾದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.

ಸ್ಕ್ರೀನಿಂಗ್‌ಗೂ ಮುನ್ನ ಥಿಯೇಟರ್‌ ಗೇಟ್‌ಗಳತ್ತ ಭಾರಿ ಜನಸ್ತೋಮ ಹೆಚ್ಚಾದಾಗ ಅವ್ಯವಸ್ಥೆ ಉಂಟಾಯಿತು. ಇದು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು. ಅಲ್ಲು ಅರ್ಜುನ್ ಅವರನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳು, ನಟ ಕಾಣಿಸಿಕೊಳ್ಳುತ್ತಿದ್ದಂತೆ ಪ್ರವೇಶದ್ವಾರದ ಕಡೆಗೆ ಧಾವಿಸಿದರು. ಜನಸಂದಣಿಯನ್ನು ನಿಯಂತ್ರಿಸಲು ನಿಯೋಜನೆಗೊಂಡಿದ್ದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದರು.

ದಿಲ್‌ಸುಖ್‌ನಗರದ ನಿವಾಸಿ ರೇವತಿ ಅವರು ತಮ್ಮ ಪತಿ ಭಾಸ್ಕರ್ ಮತ್ತು ಅವರ ಇಬ್ಬರು ಮಕ್ಕಳಾದ ಶ್ರೀ ತೇಜ್ (9) ಮತ್ತು ಸಾನ್ವಿಕಾ (7) ಅವರೊಂದಿಗೆ ಪುಷ್ಪ 2 ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು. ಪ್ರೇಕ್ಷಕರು ಗೇಟ್‌ಗಳನ್ನು ತಳ್ಳುತ್ತಿದ್ದಂತೆ, ಗಲಾಟೆಯ ನಡುವೆ ರೇವತಿ ಮತ್ತು ಅವರ ಮಗ ಶ್ರೀ ತೇಜ್ ಪ್ರಜ್ಞಾಹೀನರಾದರು.

ಸಂಧ್ಯಾ ಥಿಯೇಟರ್‌ನಲ್ಲಿ 39 ವರ್ಷದ ಸಂತ್ರಸ್ತ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ದುರ್ಗಾ ಬಾಯಿ ದೇಶಮುಖ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದ್ದು, ಆದರೆ, ಅಲ್ಲಿಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ತೀವ್ರವಾಗಿ ಗಾಯಗೊಂಡಿದ್ದ ಶ್ರೀ ತೇಜ್ ನನ್ನು ಉನ್ನತ ಚಿಕಿತ್ಸೆಗಾಗಿ ಬೇಗಂಪೇಟೆಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಗು ಸೇರಿದಂತೆ ಇತರ ಗಾಯಗೊಂಡ ವ್ಯಕ್ತಿಯ ಸ್ಥಿತಿ ಸ್ಥಿರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.