Police constable: ಒಂದು ಹಗ್ ಮಾಡು ಯಾರಿಗೂ ಹೇಳಲ್ಲ: ಯುವತಿಗೆ ಪೊಲೀಸ್ ಕಾನ್ಸ್ಟೇಬಲ್ ಕಿರುಕುಳ!
Police constable: ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಪಾಸ್ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಟೆಕ್ಕಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದು , ಅದರಂತೆ ತನಿಖೆ ನಡೆಸಿದ ನಂತರ ಕಾನ್ಸ್ಟೇಬಲ್ (Police constable) ಕಿರಣ್ ಎಂಬಾತನನ್ನು ಅಮಾನತುಗೊಳಿಸಿದ್ದಾರೆ.
ಹೌದು, ಬಾಪೂಜಿನಗರದ ಯುವತಿಯೊಬ್ಬರು ಇತ್ತೀಚಗೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್ಪೋರ್ಟ್ ವೆರಿಫಿಕೇಷನ್ಗೆಂದು ಪೊಲೀಸ್ ಕಾನ್ಸ್ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿದ್ದ. ಹಲವು ಬಾರಿ ಕಿರಣ್ ಯುವತಿಯ ಮನೆಗೆ ಹೋಗಿದ್ದ, ಅಲ್ಲದೆ ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.
ಇನ್ನು ಮನೆಯಲ್ಲಿ ಯಾರೂ ಇಲ್ಲವೆಂದು, ಪಾಸ್ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಹೇಳಿದಾಗ ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.
ಆದ್ರೆ, ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆಯೇ ಆಕೆಯ ಅಣ್ಣ ಮತ್ತೊಂದು ಕೊಠಡಿಯಲ್ಲಿ ಇರುವುದು ಪೊಲೀಸ್ ಕಾನ್ಸ್ಟೇಬಲ್ ಗಮನಕ್ಕೆ ಬಂದಿದೆ. ಆಗ ಮಾತು ಬದಲಾಯಿಸಿದ ಕಿರಣ್, ‘‘ನೀನು ಒಳಗೆ ಇದ್ದಿ ಎಂದೇ ನಾನೆ ಹಿಂಗೆ ಮಾತನಾಡಿದ್ದು, ನಿನ್ನ ತಂಗಿ ನನ್ನ ತಂಗಿ ಇದ್ದಹಾಗೆ’’ ಎಂದಿದ್ದ. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್ನನ್ನು ಅಮಾನತುಗೊಳಿಸಿದ್ದಾರೆ.