Cherkady Kambala: ಡಿ. 9 ಕ್ಕೆ ಚೇರ್ಕಾಡಿ ದೊಡ್ಡಮನೆ ಜನ್ನದೇವಿ ಕಂಬಳ – ಮನೆತನದಿಂದ ಸರ್ವರಿಗೂ ಆತ್ಮೀಯ ಸ್ವಾಗತ
Cherkady Kambala: ತುಳು ನಾಡಿನ ಜನಪದ ಕ್ರೀಡೆಯಾಗಿ ವಿಜೃಂಭಿಸುತ್ತಿರುವ ಕಂಬಳ ಇಂದು ನಾಡಿನಾದ್ಯಂತ ಖ್ಯಾತಿ ಪಡೆದಿದೆ. ತುಳುನಾಡಿನ ನೆಲದಲ್ಲಿಯೇ ಕಂಬಳ ನೋಡುವುದೆಂದರೆ ಒಂದು ಖುಷಿ. ಅಂದಹಾಗೆ ಚೇರ್ಕಾಡಿ ದೊಡ್ಡಮನೆಯವರ ಕುಟುಂಬದ ನಾಗಬನದ ನಾಗಬ್ರಹ್ಮದೇವರ ಆರಾಧನೆಯಾಗಿ ಪ್ರತಿ ವರುಷವು ಆರಾಧಿಸಿ ಕೊಂಡು ಬರುವ ಕಂಬಳವು(Cherkadi Kambala)ತನ್ನದೇ ವಿಶಿಷ್ಟತೆಯನ್ನು ಹೊಂದಿದೆ. ಈ ಸಲವೂ ಕೂಡ ಈ ಮನೆತನ ಬಹಳ ವಿಜೃಂಭಣೆಯಿಂದ ಕಂಬಳವನ್ನು ಆಚರಿಸಲು ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಚೇರ್ಕಾಡಿ ದೊಡ್ಡಮನೆಯವರ ಕುಟುಂಬದ ‘ಕಂಬಳವು’ ತಾರೀಕು 09-12-2024 ಸೋಮವಾರ ರಂದು ನಡೆಸಲು ನಿಶ್ಚಯಿಸಲಾಗಿದೆ.
ಹೌದು, ಸಂಪ್ರದಾಯ ಬದ್ದ ಧಾರ್ಮಿಕ ಕಂಬುಲ (ಕಂಬಳ)ದಲ್ಲಿ ದೈವ ದೇವತಾ ಆರಾಧನೆ ಪ್ರಧಾನವಾಗಿರುವುದರಿಂದ ಇಂದಿಗೂ ಸುಸೂತ್ರವಾಗಿ ನಡೆಸುವ ಜವಾಬ್ದಾರಿಯಿಂದ ಸಂಪ್ರದಾಯಬದ್ದವಾಗಿ ನಾವು ನಮ್ಮ ಕುಟುಂಬಿಕರು,ಊರ ಪರವೂರ ಗಣ್ಯರು ಹಿರಿಯರು, ಸಹಕಾರದಿಂದ ನಡೆಸಲು ತೀರ್ಮಾನಿಸಲಾಗಿದೆ.
ಕಂಬುಲವು ಒಂದು ಊರಿನ ಶ್ರೀಮಂತವಾದ ಆರಾಧನ ಪದ್ಧತಿಯು ಹೌದು. ಆರಂತಡೆ ಗುತ್ತು ಬರ್ಕೆ, ಬೂಡು ಅರಮನೆ ಮುಂತಾದ ಪ್ರತಿಷ್ಠಿತ ಮನೆತನದ ಕುರುಹು ಹೌದು. ಜನಪದ ಕ್ರೀಡೆ ಕಂಬಳ ಹೌದಾದರೂ ಭಕ್ತಿಯ ಪ್ರತೀಕ ಕಂಬುಲ ಅಷ್ಟೇ ಕಾರಣಿಕವು ಹೌದು. ನಾಗಬ್ರಹ್ಮನ ಕಂಬುಲವು ಇಂದು ಜನರ ಬಾಯಿಯಲ್ಲಿ ಕಂಬಳ ಆಗಿದೆ.
ಕಂಬಳ ಕೇವಲ ಕ್ರೀಡೆ ಹಾಗೂ ಸ್ಪರ್ದೆಗೆ ಮಾತ್ರ ಸೀಮಿತ ಆಗದೆ. ಅದರಲ್ಲೂ ಹಲವು ವಿಧಗಳನ್ನು ಇಂದು ಕಾಣಬಹುದು.
ದೇವರ ಕಂಬಳ, ದೈವ ಕಂಬಳ, ಧೂಳುಕಂಬಳ, ಕ್ರೀಡಾ ಕಂಬಳ , ಸ್ಫರ್ಧೆಯ ಕ್ರೀಡಾ ಕಂಬಳ ಅನ್ನುವ ಹಲವು ವಿಧಾನದ ಕಂಬಳ ಇದೆ. ಇವುಗಳು ಕ್ರೀಡೆಗೆ ಸೀಮಿತ. ಇಲ್ಲಿ ಆರಾಧನೆಗೆ ಪ್ರಾಮುಖ್ಯತೆ ಇರುವುದಿಲ್ಲ.ರಾಜ್ಯ ಸರಕಾರವು ಇಂತಹ ಕ್ರೀಡಾ ಕಂಬಳಗಳಿಗೆ ಅನುದಾನವನ್ನು ನೀಡುತ್ತಿದೆ. ಆದರೆ ಭಕ್ತಿ ಪ್ರಧಾನವಾಗಿ ಸಂಪ್ರದಾಯ ಬದ್ದವಾಗಿ ಆರಾಧಿಸಿಕೊಂಡು ಬರುವ ನಾಗಬ್ರಹ್ಮ ದೇವರ ಕಂಬುಲಗಳಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ.
ಗುತ್ತು ಬರ್ಕೆ ಬೂಡು ಆರಂತಡೆಗಳು ಹಿಂದಿನ ಕಾಲದಲ್ಲಿ ಶ್ರೀಮಂತವಾಗಿದ್ದವು. ಈ ಕಂಬುಲವನ್ನು ನಡೆಸಿಕೊಂಡು ಹೋಗಲು ಸಮರ್ಥವಾಗಿದ್ದವು. ಆದರೆ ಇಂದು ಗುತ್ತು ಬರ್ಕೆ ಬೂಡು ಆರಂತಡೆ ಗಳ ಪರಿಸ್ಥಿತಿ ಅಷ್ಟು ಖರ್ಚು ವೆಚ್ಚವನ್ನು ನೋಡಿ ಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ ಸರ್ಕಾರ ಮದ್ಯ ಪ್ರವೇಶಿಸಿ, ದೊಡ್ಡ ಮನಸ್ಸು ಮಾಡಿ ಈ ಸಂಪ್ರದಾಯ ಬದ್ದ ನಾಗ ಬ್ರಹ್ಮರ ಕಂಬುಲಗಳಿಗೂ ಅನುದಾನ ನೀಡಬೇಕು ಎನ್ನುವುದು ಎಲ್ಲಾ ಜನತೆಯ ಆಶಯವಾಗಿರುತ್ತದೆ.