Student: ಕಟಿಂಗ್ ಶಾಪ್​ಗೆ ವಿದ್ಯಾರ್ಥಿಯನ್ನು ಕರೆದೊಯ್ದು ತಲೆ ಬೋಳಿಸಿದ ಶಿಕ್ಷಕ!

 

Student: ಸರ್ಕಾರಿ ವೈದ್ಯಕೀಯ ಕಾಲೇಜು ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು (Student) ಕ್ಷೌರಿಕನ ಅಂಗಡಿಗೆ ಕರೆದೊಯ್ದು, ಅವನ ತಲೆ ಪೂರ್ತಿ ಬೋಳಿಸಿದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಇದೀಗ ವಿದ್ಯಾರ್ಥಿಯ ತಲೆ ಬೋಳಿಸಿದ್ದಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧ್ಯಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ. ನವೆಂಬರ್ 12ರಂದು ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಆರೋಗ್ಯ ಸಚಿವ ದಾಮೋದರ್ ರಾಜ ನರಸಿಂಹ ಅವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಇದು ರ್ಯಾಗಿಂಗ್ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರದ ಅಧಿಕಾರಿಗಳ ಪ್ರಕಾರ, ಆರಂಭದಲ್ಲಿ ಸಂಸ್ಥೆಯ ಹಾಸ್ಟೆಲ್‌ನಲ್ಲಿರುವ ಕೆಲವು ಸೀನಿಯರ್​ಗಳು ಮೊದಲ ವರ್ಷದ ವಿದ್ಯಾರ್ಥಿಯ ಹೇರ್​ಸ್ಟೈಲ್ ಸಭ್ಯ ರೀತಿಯಲ್ಲಿ ಇಲ್ಲ ಎಂದು ಹೇಳಿದ್ದರು. ಈ ಹಿನ್ನಲೆ ಆತನಿಗೆ ಕೂದಲು ಟ್ರಿಮ್ ಮಾಡಲು ಸೂಚಿಸಿದರು. ಆದರೆ ವಿದ್ಯಾರ್ಥಿಯು ತನ್ನ ಕೂದಲನ್ನು ಟ್ರಿಮ್ ಮಾಡಿದ ನಂತರ ಹಾಸ್ಟೆಲ್ ಉಸ್ತುವಾರಿಯಾಗಿದ್ದ ಆ ಕಾಲೇಜಿನ ಉಪನ್ಯಾಸಕ ಈ ಹೇರ್​ಸ್ಟೈಲ್ ವಿಚಿತ್ರವಾಗಿದೆ ಎಂದು ಹೇಳಿ ಆತನನ್ನು ಸಲೂನ್‌ಗೆ ಕರೆದೊಯ್ದು ತಲೆ ಬೋಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ತಲೆ ಬೋಳಿಸಿದ ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ಬಂದ ನಂತರ, ಶನಿವಾರ ಆ ಉಪನ್ಯಾಸಕರನ್ನು ಹಾಸ್ಟೆಲ್‌ನಿಂದ ತೆಗೆದುಹಾಕಲು ಆದೇಶಿಸಿದರು. ಈ ಘಟನೆಯ ಕುರಿತು ತನಿಖೆಗಾಗಿ ಸಮಿತಿಯನ್ನು ಸಹ ರಚಿಸಿದರು. ಅಲ್ಲದೇ ಸಹಾಯಕ ಪ್ರಾಧ್ಯಾಪಕರು ಇಂತಹ ಚಟುವಟಿಕೆಯಲ್ಲಿ ತೊಡಗುವುದು ಒಳ್ಳೆಯದಲ್ಲ ಎಂದು ಪ್ರಾಂಶುಪಾಲರು ಹೇಳಿದರು. ಆದರೆ, ಆ ಉಪನ್ಯಾಸಕರ ಪ್ರಕಾರ, ಆ ವಿದ್ಯಾರ್ಥಿಯನ್ನು ಶಿಸ್ತುಬದ್ಧಗೊಳಿಸುವುದು ಮಾತ್ರ ಅವರ ಉದ್ದೇಶವಾಗಿತ್ತು. ಹೀಗಾಗಿ, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

Leave A Reply

Your email address will not be published.