PDO Exam: ಪಿಡಿಓ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ- ಪಿಡಿಓ ಪರೀಕ್ಷಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು
PDO Exam: ಪಿಡಿಓ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ನಡೆಸಿದ್ದು, ಪಿಡಿಓ ಪರೀಕ್ಷಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಹೌದು, ಪಿಡಿಓ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಯಲ್ಲಿ 12 ಜನ ಹಾಗೂ ಇತರೆ ಪಿಡಿಓ ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು (Sidhanuru) ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಯಚೂರಿನ (Raichur) ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆ ಪರೀಕ್ಷೆಯಲ್ಲಿ ಅಕ್ರಮ, ಪೇಪರ್ ಲೀಕ್ ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ನ.17 ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ದೂರು ನೀಡಿದ್ದು, ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಹುತೇಕ ಯಾದಗಿರಿ ಜಿಲ್ಲೆಯ ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಓರ್ವ ಪರೀಕ್ಷಾರ್ಥಿಯನ್ನ ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಟ್ಟಿದ್ದಾರೆ.
ಸುಳ್ಳು ಸುದ್ದಿ ಹರಡಿ ಕಾಲೇಜಿನ ಮುಂದುಗಡೆ ಗಲಾಟೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ, ಕೊಠಡಿ ಸಂಖ್ಯೆ 05ರಲ್ಲಿ ಗೊಂದಲ ಸೃಷ್ಟಿಸಿ ಗಲಾಟೆ ಮಾಡಿದ ಪರೀಕ್ಷಾರ್ಥಿ ಕಾಶಿಪತಿಯನ್ನ ವಶಕ್ಕೆ ಪಡೆದು, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ 97 (ಪಿಡಿಒ) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಸಿದ್ದಪಡಿಸಲಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ. (ಪಿಡಿಒ) ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕ ಭಾಗದ 298 ಪರೀಕ್ಷಾ ಉಪ ಕೇಂದ್ರಗಳಲ್ಲಿ ನಿನ್ನೆ ಸ್ಪರ್ಧಾತ್ಮಕ ಪರೀಕ್ಷೆ ಆಯೋಜನೆಗೊಂಡಿತ್ತು. ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ರಕಾರ, ಒಂದು ಕೋಣೆಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದರೆ ಕೊಠಡಿಗೆ 24 ಪ್ರಶ್ನೆಪತ್ರಿಕೆ ಬದಲು ಕೇವಲ 12 ಪ್ರಶ್ನೆಪ್ರತಿಕೆಯನ್ನು ಕೆಪಿಎಸ್‌ಸಿ ಕಳುಹಿಸಿದೆ. ಈ ಹಿನ್ನೆಲೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಮಾತ್ರವಲ್ಲದೇ ಕೊಠಡಿಗೆ ತರುವಾಗಲೇ ಬಂಡಲ್‌ಗಳು ತೆರೆದಿದ್ದವು. ಅಷ್ಟೇ ಅಲ್ಲದೇ ಪರೀಕ್ಷೆ ನಿಗದಿಯಾದ ಸಮಯಕ್ಕಿಂತಲೂ ತಡವಾಗಿ ಆರಂಭವಾಗಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.
ಸರ್ಕಾರಿ ಪದವಿ ಕಾಲೇಜಿನ ಎದುರಿನ ಕುಷ್ಟಗಿ ಸಿಂಧನೂರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಪ್ರತಿಭಟಿಸಿದ್ದು, ಸ್ಥಳಕ್ಕೆ ಸಿಂಧನೂರು ನಗರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.