Dr Manjunath: ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣ ಆರೋಪ -ಸಂಸದ ಡಾ. ಮಂಜುನಾಥ್‌ಗೂ ಸಂಕಷ್ಟ?

ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣವನ್ನು ತನಿಖೆ ಮಾಡುವುದಕ್ಕೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದರ ಬೆನ್ನಲ್ಲಿಯೇ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಅವರ ಜೊತೆಗೆ ಕೋವಿಡ್ ಟಾಸ್ಕ್‌ ಫೋರ್ಸ್ ಸಮಿತಿ ಮುಖ್ಯಸ್ಥರಾಗಿದ್ದ ಡಾ.ಸಿ.ಎನ್. ಮಂಜುನಾಥ್ ಅವರಿಗೂ ಸಂಕಷ್ಟ ಎದುರಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ

ಹೌದು, ನಿನ್ನೆ ನಡೆದ ಕ್ಯಾಬಿನೆಟ್‌ ಚರ್ಚೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ನಡೆದ ಹಗರಣಗಳ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ಕೋವಿಡ್‌ ಸಮಯದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ಡಾ.ಮಂಜುನಾಥ್ ಅವರಿಗೂ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಿಗ್ ಅಪ್ಡೇಟ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಕೋವಿಡ್ ಹಗರಣದ ತನಿಖೆ ಎಸ್‌ಐಟಿಯಿಂದ ಪ್ರಾಮಾಣಿಕವಾಗಿಯೇ ಆಗಲಿದೆ. ನಾವು ವಿಪಕ್ಷದಲ್ಲಿ ಇದ್ದಾಗ ಕೋವಿಡ್ ನಿರ್ವಹಣೆಗೆ ಮಾಡಿದ ವೆಚ್ಚದ ಬಗ್ಗೆ ಗಂಭೀರವಾದ ಆರೋಪಗಳನ್ನ ಮಾಡಿದ್ದೆವು. ಈಗ ಸಾಕಷ್ಟು ವಿಚಾರಗಳು ವರದಿಯಲ್ಲಿ ಬಹಿರಂಗ ಆಗಿದೆ. ಹೀಗಾಗಿ, ವ್ಯವಸ್ಥಿತ ರೀತಿಯಲ್ಲಿ ತನಿಖೆ ಆಗಬೇಕಾಗಿದೆ. ಎಸ್ಐಟಿ ಯಾವ ರೀತಿ ಕಾರ್ಯ ವೈಖರಿ ಇರುತ್ತದೆ ಅಂತ ನಾವು ಹೇಳಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಮಾಹಿತಿಯನ್ನು, ಅವರು ಕೇಳುವ ಇನ್ನಷ್ಟು ದಾಖಲೆಗಳನ್ನು ಕೊಡುವ ಜವಾಬ್ದಾರಿ ನಮ್ಮ ಇಲಾಖೆಯದ್ದಾಗಿದೆ. ಕೋವಿಡ್ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ನಷ್ಟ ಆಗಿದೆ. ಇದು ಸಾಮಾನ್ಯ ವಿಷಯವಲ್ಲ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರುಗಳು ಅವ್ಯವಹಾರಕ್ಕೆ ಕಾರಣಕರ್ತರು. ಅದೆಲ್ಲವೂ ಕೂಡ ಈಗ ಹೊರಗೆ ಬರಬೇಕು. ಇದರಲ್ಲಿ ವಿಪಕ್ಷಗಳನ್ನ ಬೆದರಿಸುವಂಥದ್ದು ಏನು ಇಲ್ಲ ಎಂದು ಹೇಳಿದ್ದಾರೆ.

ಸಂಸದ ಡಾ. ಮಂಜುನಾಥ್‌ಗೂ ಸಂಕಷ್ಟ?
ರಾಜ್ಯದಲ್ಲಿ ಕೋವಿಡ್ ಹಗರಣ ಕಾಲದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರು ಟಾಸ್ಕ್ ಫೋರ್ಸ್ ಕಮಿಟಿ ಮುಖ್ಯಸ್ಥರಾಗಿದ್ದರು. ಟಾಸ್ಕ್ ಫೋರ್ಸ್ ನಿರ್ಣಯದಂತೆ ರಾಜ್ಯ ಸರ್ಕಾರದಿಂದ ಹಲವು ವಸ್ತುಗಳನ್ನು ಖರೀದಿ ಮಾಡಿ ಉಪಯೋಗಿಸಿದೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಬಗ್ಗೆಯೂ ಕುನ್ಹಾ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದ್ದರಿಂದ, ಸಂಸದ ಡಾ.ಮಂಜುನಾಥ್ ವಿರುದ್ದವೂ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದ್ದು, ಅವರಿಗೂ ಸಂಕಷ್ಟ ಬರಲಿದೆಯೇ ಪ್ರಶ್ನೆ ಶುರುವಾಗಿದೆ.

Leave A Reply

Your email address will not be published.