Government property: ಕಡಬ: ವೃದ್ಧ ದಂಪತಿಗಲೆಂದು ನೋಡದೆ ಮನೆ ನೆಲಸಮ! ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ಧಿಕ್ಕಾರ

Government property: ಕಳೆದ ಆರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ (Government property) ಮನೆ ನಿರ್ಮಿಸಿ ವಾಸವಿದ್ದ ವೃದ್ಧ ದಂಪತಿಗಳ ಮನೆಯೊಂದನ್ನು ಪೊಲೀಸ್‌ ನೇತೃತ್ವದಲ್ಲಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನೆಲಸಮ ಮಾಡಿದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಎಂಬಲ್ಲಿ ನಡೆದಿದೆ.

ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿ ಮನೆಯನ್ನು ಬುಧವಾರ ಏಕಾಏಕಿ ಧ್ವಂಸಗೊಳಿಸಲಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿ ನಿವಾಸಿಗಳಾಗಿದ್ದ ದಂಪತಿ ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದರು. ದಂಪತಿಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಇರಲಿಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.

ಆದ್ರೆ ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಅಶೋಕ್‌ ಆಚಾರ್ಯ ಎಂಬವರು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿದ ಕಾರಣ ಕಳೆದ ಫೆಬ್ರವರಿಯಲ್ಲಿ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆ ಮನೆ ಕೆಡವದೆ ಹಾಗೇ ಇಡಲಾಗಿತ್ತು.

ಇದೀಗ ದಿಢೀ‌ರ್ ಆಗಮಿಸಿದ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗೆ ಎಸೆದು ಮನೆಯನ್ನು ಕೆಡವಿ ಹಾಕಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಕರಗದ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾ‌ರ್ ಪ್ರಭಾಕರ ಖಜೂರೆ, ಆರ್‌ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.

Leave A Reply

Your email address will not be published.