Mudigere: ಕಾಫಿ ನಾಡಲ್ಲಿ ಮಂಗಳಾರತಿ ವೇಳೆ ಅಲುಗಾಡಿ ವಿಸ್ಮಯ ಮೂಡಿಸುತ್ತೆ ಉಣ್ಣಕ್ಕಿ ಹುತ್ತ – ಎಲ್ಲಿ, ಯಾವಾಗ ಗೊತ್ತಾ?
Mudigere: ಮಲೆನಾಡಿನ ಮಡಿಲಲ್ಲಿ ಅನೇಕ ಧಾರ್ಮಿಕ ವಿಸ್ಮಯಗಳು ನಡೆಯುತ್ತಿರುತ್ತವೆ. ಅವುಗಳ ಸರದಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಬಗ್ಗಸಗೋಡು-ಬಾನಳ್ಳಿಯ ಗ್ರಾಮದಲ್ಲಿ ವಿಸ್ಮಯ ಸೃಷ್ಟಿಸುವ ಮೂಲಕ ಮನೆ ಮಾತಾಗಿದೆ. ಅಂದು ಸಹಸ್ರಾರು ಭಕ್ತರು ಅಲುಗಾಡುವ ಹುತ್ತವನ್ನು ಕಣ್ಣುಂಬಿಸಿಕೊಳ್ಳುತ್ತಾರೆ. ಅಂತೆಯೇ ಈ ವರ್ಷವೂ ಅಲುಗಾಡವ ಹುತ್ತವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.
ಹೌದು, ಇದೇ ನ.14ರಂದು ಗುರುವಾರ ಬಾನಹಳ್ಳಿಯಲ್ಲಿ ಅಲುಗಾಡುವ ಹುತ್ತದ ಪವಾಡ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾತುರರಾಗಿದ್ದಾರೆ. ಬಾನಹಳ್ಳಿಯಲ್ಲಿ ನಡೆಯುವ ಉಣ್ಣಕ್ಕಿ ಹುತ್ತದ ಜಾತ್ರೆಗೆ ವಿಸ್ಮಯ ವೀಕ್ಷಿಸಲು ಸಂಜೆ ಬಗ್ಗಸಗೋಡು ಮಾತ್ರವಲ್ಲದೇ ಸ್ಥಳೀಯ ಗ್ರಾಮಗಳು,ವಿವಿಧ ಜಿಲ್ಲೆಯಿಂದ ಜನಸಾಗರವೇ ಹರಿದು ಬರುತ್ತದೆ.ಬೆಳಿಗ್ಗೆಯಿಂದಲೆ ಹುತ್ತಕ್ಕೆ ವಿಶೇಷ ಪೂಜೆ ನಡೆಯುತ್ತದೆ.ಆದರೆ ಸಂಜೆ 6ಗಂಟೆಯಿಂದ 10ರವರೆಗೆ ನಡೆಯುವ ವಿಸ್ಮಯ ಸೃಷ್ಟಿಸುವ ವಿಶೇಷ ಪೂಜೆಯಲ್ಲಿ ಪ್ರತಿವರ್ಷವೂ ಸಾವಿರಾರು ಭಕ್ತ ಗಣ ಸೇರಿ ಹಾಲು ಮತ್ತು ಅಕ್ಕಿಯನ್ನು ಸಮರ್ಪಿಸಿ ಭಕ್ತರು ಭಕ್ತಿ ಮೆರೆಯುತ್ತಾರೆ.ಹೊಸತಾಗಿ ಮದುವೆಯಾದ ನವ ದಂಪತಿಗಳು ಕೂಡ ಇಲ್ಲಿ ಹರಕೆ ಸಲ್ಲಿಸುವುದು ವಾಡಿಕೆಯಲ್ಲಿದೆ.
ಉಣ್ಣಕ್ಕಿ ಹುತ್ತದ ವಿಶೇಷವೆಂದರೆ, ಈ ಭಾಗದ ಜನರಿಗೆ, ಜಾನುವಾರುಗಳಿಗೆ ಕಾಯಿಲೆ ಬಂದರೆ ಹುತ್ತದ ಮಣ್ಣು ಮೈಗೆ ಹಚ್ಚಿದರೆ ಕಾಯಿಲೆ ಗುಣವಾಗುತ್ತದೆ ಎಂಬ ಅಚಲ ನಂಬಿಕೆ ಸ್ಥಳೀಯರದ್ದು ಹಾಗೂ ನಂಬಿದ ಭಕ್ತರದ್ದು. ಇನ್ನು ಮಣ್ಣಿನಿಂದಲೇ ನಿರ್ಮಾಣವಾದ ಹುತ್ತ 10 ಅಡಿ ಎತ್ತರವಿದ್ದು ಮಣ್ಣಿನಿಂದಲೇ ಆವೃತ್ತವಾಗಿದೆ. ಈ ಭಾಗದಲ್ಲಿ ದನಕರುಗಳಿಗೆ ಮನುಷ್ಯರಿಗೆ ಕಾಯಿಲೆ ಬಂದರೆ ಈ ಹುತ್ತದ ಮಣ್ಣು ಕೈಗೆ ಹಚ್ಚುವುದರಿಂದ ಕಾಯಿಲೆ ದೂರವಾಗುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿ ಅಚಲವಾಗಿ ಉಳಿದಿದೆ.
ಇನ್ನು ಕೆಲವು ವರ್ಷಗಳ ಹಿಂದೆ ಮಲೆನಾಡಿನ ಕೆಲವೇ ಗ್ರಾಮಗಳಿಗೆ ಸೀಮಿತವಾಗಿದ್ದ ಈ ಉತ್ಸವ ಈಗ ಎಲ್ಲ ಜನರನ್ನು ಸೆಳೆಯುತ್ತದೆ. ದೀಪಾವಳಿ ಕಳೆದು ಬರುವ ಹುಣ್ಣಿಮೆಗೆ ಪೂರಕವಾಗಿ ಗುರುವಾರ ಅಥವಾ ಭಾನುವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ.
ರಾತ್ರಿ 8 ರಿಂದ 8.30ರ ಮಧ್ಯೆ ಮಹಾ ಮಂಗಳಾರತಿ ನಡೆಯುತ್ತದೆ. ಬಳಿಕ ಹುತ್ತದ ಸುತ್ತ ಮೂರು ಸುತ್ತು ಹೋರಿಗಳನ್ನು ಓಡಿಸಲಾಗುತ್ತದೆ. ಬಳಿಕ ಹೋರಿಯನ್ನು ಕಾಡಿಗೆ ಬಿಡಲಾಗುತ್ತದೆ. ಹಿಂದೆ ಜಾನುವಾರುಗಳಿಗೆ ರೋಗ ರುಜಿನಗಳು ಬರಬಾರದು ಎಂಬ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿತ್ತು. ಇನ್ನು ಹುತ್ತಕ್ಕೆ ಮಂಡಕ್ಕಿ ಎರಚಿ ಹರಕೆ ತೀರಿಸುತ್ತಾರೆ ಭಕ್ತರು.