Udupi: ಮಧ್ಯರಾತ್ರಿ ಬಂದಿದ್ದ ಇನ್ಸ್ಟಾಗ್ರಾಂ ಲವರ್ ಮನೆಗೆ; ಅನೈತಿಕ ಸಂಬಂಧಕ್ಕೆ ಕರಿಮಣಿ ಮಾಲೀಕನ ಕೊಲೆ
Udupi: ಕಾರ್ಕಳ ತಾಲೂಕಿನ ಅಜೆಕಾರಿನ ಬಾಲಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಹಲವು ಮಾಹಿತಿಗಳು ಹೊರಬರುತ್ತಿದೆ. ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಮಧ್ಯರಾತ್ರಿ ಬಾಲಕೃಷ್ಣರ ಮುಖಕ್ಕೆ ಬೆಡ್‌ಶೀಟ್ ಒತ್ತಿ ಹಿಡಿದು ಕೊಲೆ ಮಾಡಿರುವ ಮಾಹಿತಿ ವರದಿಯಾಗಿದೆ.
ಅಜೆಕಾರು ಮರ್ಣೆ ಗ್ರಾಮದ ಬಾಲಕೃಷ್ಣ (44) ಕೊಲೆ ಪ್ರಕರಣದಲ್ಲಿ ಪತ್ನಿ ಪ್ರತಿಮಾ, ಪ್ರಿಯಕರ ದಿಲೀಪ್ ಹೆಗ್ಡೆ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಸಪ್ತಪದಿ ತುಳಿದು, ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ ಎಂದು ಪ್ರಮಾಣ ಮಾಡಿ ಮನೆಗೆ ಬಂದ ಪತ್ನಿಯಿಂದಲೇ ಬಾಲಕೃಷ್ಣ ಅವರು ಕೊಲೆಯಾಗಿರುವುದು ಖೇದಕರ. ಅಷ್ಟಕ್ಕೂ ಪ್ರತಿಮಾಗೆ ದಿಲೀಪ್ ಹೆಗ್ಡೆ ಪರಿಚಯವಾಗಿದ್ದು ಹೇಗೆ? ಇಲ್ಲಿದೆ ಉತ್ತರ.
ಬಾಲಕೃಷ್ಣ ಮತ್ತು ಪ್ರತಿಮಾ 17 ವರ್ಷದ ಹಿಂದೆ ಇಬ್ಬರಿಗೂ ಮದುವೆ ಆಗಿದ್ದು, ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಕೊರೊನಾ ನಂತರ ಇವರ ಕುಟುಂಬ ಮುಂಬೈನಿಂದ ಅಜೆಕಾರಿಗೆ ಬಂದಿತ್ತು. ಹೊಸ ಮನೆ ಕೂಡಾ ಮಾಡಿಕೊಂಡಿದ್ದರು.
ಅಜೆಕಾರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಪ್ರತಿಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಳು. ಗಂಡನೊಂದಿಗೆ ರೀಲ್ಸ್ ಮಾಡಿಕೊಂಡು ಇದ್ದ ಈಕೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಕಾರ್ಕಳದ ದಿಲೀಪ್ ಹೆಗ್ಡೆ ಪರಿಚಯವಾಗಿದೆ. ಪರಿಚಯದಿಂದ ಸ್ನೇಹ, ನಂತರ ಅನೈತಿಕ ಸಂಬಂಧದವರೆಗೆ ಹೋಗಿತ್ತು. ತಮ್ಮ ಈ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಇಬ್ಬರು ಮಾತಾಡಿಕೊಂಡು ಬಾಲಕೃಷ್ಣ ಕೊಲೆ ಮಾಡಬೇಕೆಂದು ಸಂಚು ಮಾಡಿದ್ದಾರೆ.
ನಂತರ ನಡೆದದ್ದೇ ಇವರ ರೋಚಕ ಪ್ಲ್ಯಾನ್. ದಿಲೀಪ್ ಹೆಗ್ಡೆ ಪ್ರತಿಮಾಳಿಗೆ ವಿಷ ಪದಾರ್ಥ ತಂದಿದ್ದ, ಅದನ್ನು ಬಾಲಕೃಷ್ಣ ಊಟದಲ್ಲಿ ಸೇರಿಸಿ ಕೊಡು ಎಂದು ಹೇಳಿದ್ದ. ಆಕೆ ಅದರಂತೆ ಮಾಡಿ ಊಟದಲ್ಲಿ ಸೇರಿಸಿ ಹಲವು ಬಾರಿ ನೀಡಿದ್ದಾರೆ. ನಂತರ ಬಾಲಕೃಷ್ಣನ ಅನಾರೋಗ್ಯ ಹೆದಗೆಟ್ಟಿದೆ. ಹದಗೆಟ್ಟು ಹಲವು ಆಸ್ಪತ್ರೆಗೆ ಸೇರಿಸಿದರೂ ಗುಣವಾಗದ ಕಾರಣ ಕೊನೆಯ ಬಾರಿ ಎಂಬಂತೆ ಅ.20 ರಂದು ಗಂಡನನ್ನು ಮುಗಿಸುವ ಆಲೋಚನೆ ಮಾಡಿದ್ದಾಳೆ. ಅದಕ್ಕಾಗಿ ದಿಲೀಪ್ ಹೆಗ್ಡೆಯನ್ನು ದೆಪ್ಪುತ್ತೆಯ ಮನೆಗೆ ಬರಲು ಹೇಳಿದ್ದಾಳೆ.
ಮಧ್ಯರಾತ್ರಿ ಅ.20 ರಂದು 1.30ರ ಸುಮಾರಿಗೆ ಪ್ರತಿಮಾ ಮನೆಗೆ ಬಂದಿದ್ದ ದಿಲೀಪ್ ಹೆಗ್ಡೆ, ಪ್ರತಿಮಾ ಸೇರಿ ಬೆಡ್‌ಶೀಟನ್ನು ಬಾಲಕೃಷ್ಣ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ.
ಕುಟುಂಬದಸ್ಥರು ಸೇರಿ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ನಂತರ ಮರಣೋತ್ತರ ಧಾರ್ಮಿಕ ವಿಧಿ ವಿಧಾನಗಳ ನಡೆಯುತಿದ್ದ ದಿನದಂದು ತನ್ನ ಸಹೋದರ ಬಳಿ ಪ್ರತಿಮಾ ನಡೆದ ಘಟನೆಯನ್ನು ಹೇಳಿದ್ದಾಳೆ.
ಆಡಿಯೋದಲ್ಲಿ ಏನಿದೆ?
ಸಂದೀಪ್- ಹೌದಾ.. ಅವರು ರಾತ್ರಿ ಬಂದದ್ದು ಹೌದಾ?
ಪ್ರತಿಮಾ- ಬಾಗಿಲು ಹಾಕು ನಾನು ಸಾಯುತ್ತೇನೆ ನನಗೆ ಆಗುವುದಿಲ್ಲ.
ಸಂದೀಪ್- ನೀನು ಸಾಯಿ ನನಗೆ ಬೇಜಾರಿಲ್ಲ ಯಾಕಂದ್ರೆ ನನಗೆ ನನ್ನ ದೇವರೇ ಹೋದರು ಆದರೆ ನೀನು ಅವನನ್ನು ಯಾಕೆ ಕರೆದದ್ದು?
ಪ್ರತಿಮಾ- ನನ್ನದು ತಪ್ಪಾಯ್ತು ನಿಧಾನ ಮಾತನಾಡು.
ಸಂದೀಪ್- ಜೀವನೇ ಹೋಯಿತಲ್ಲ ಅಂತಹ ದೇವರನ್ನ ಯಾಕೆ ಕೊಂದದ್ದು? ನಿನಗೆ ಅವರು ಏನು ಕಷ್ಟ ಕೊಟ್ಟಿದ್ದಾರೆ. ಅವರಿಗೆ ಯಾವುದಾದರೂ ಒಂದು ಹೆಣ್ಣಿನ ಜೊತೆ ಸಂಪರ್ಕ ಇತ್ತಾ? ಮೇಲೆ ಹೋದವರಿಗೊಂದು ನ್ಯಾಯ ಸಿಗಬೇಕಲ್ಲ.
ಪ್ರತಿಮಾ- ನಾನು ಸಾಯುತ್ತೇನೆ ನಾನು ಸಾಯುತ್ತೇನೆ.
ಸಂದೀಪ್- ಕೊಂದದ್ದು ಯಾಕೆ ಹೇಳು?
ಪ್ರತಿಮಾ- ನನ್ನದು ತಪ್ಪಾಯಿತಣ್ಣ.
ಸಂದೀಪ್- ನಾನು ಮನೆಯಿಂದ ಹೋದ ಮೇಲೆ ಅವನನ್ನು ಕರೆಸಿದ್ದಾ? ನಿಜ ಹೇಳು ನಿನಗೆ ಆಗುವ ಶಿಕ್ಷೆ ಕಡಿಮೆ ಮಾಡಿಸುತ್ತೇನೆ. ನಿನ್ನ ಇನ್ನೊಂದು ಮೊಬೈಲ್ ಇದೆಯಲ್ಲ ಎಲ್ಲಿದೆ?
ಪ್ರತಿಮಾ- ನಾನು ಫೋನ್ ಮಾಡಿ ಕರೆಸಿದೆ.
ಸಂದೀಪ್- ಅವನ ಬಳಿ ಹಣ ಇದೆ ಎಂದು ನೀನು ಗಂಡನನ್ನು ಕೊಲ್ಲಿಸಿದೆಯಾ? ಐದಾರು ತಿಂಗಳಿಂದ ನಿಮ್ಮ ನಡುವಿನ ಸಂಬಂಧ ನನಗೆ ಗೊತ್ತಿದೆ.
ಪ್ರತಿಮಾ- ತಪ್ಪಾಯ್ತು ನನ್ನನ್ನು ಕ್ಷಮಿಸು. ಅವರದ್ದು ಒಂದು ಕೆಲಸ ಆಗಲಿ ಆಮೇಲೆ ನಾನು ಸಾಯುತ್ತೇನೆ.
ಸಂದೀಪ್- ನೀನು ಸತ್ತರೂ ಬೇಸರ ಪಡುವುದಿಲ್ಲ. ನಿನ್ನ ಯಾವುದೇ ಮರಣೋತ್ತರದ ಕ್ರಿಯೆ ಕೆಲಸಗಳನ್ನು ಮಾಡುವುದಿಲ್ಲ. ನಿನ್ನ ಹೆಣವನ್ನು ನದಿಗೆ ಬಿಸಾಡುತ್ತೇನೆ. ದೇವರಂತ ಬಾವನನ್ನು ಕೊಂದೆಯಲ್ಲ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ಅದರ ತಲೆಬಿಸಿ ಬೇಡ. ಆ ಬೆವರ್ಸಿಯನ್ನು ಕರೆಸಿ ಕೊಲ್ಲಿಸಿದೆಯಲ್ಲ ನಾನು ನಿನಗೆ 18 ವರ್ಷದಲ್ಲಿ ಮದುವೆ ಮಾಡಿಸಿದ್ದೇನೆ. ನಾನು ಜವಾಬ್ದಾರಿ ನಿರ್ವಹಿಸಿದ್ದೇನೆ.
ಪ್ರತಿಮಾ- ಹೊರಗೆ ಎಲ್ಲರಿಗೆ ಕೇಳಿಸುತ್ತಿದೆ ಮೆಲ್ಲ ಮಾತನಾಡು
ಸಂದೀಪ್- ಇಡೀ ಊರಿಗೆ ಗೊತ್ತಾಗಿ ಆಗಿದೆ ಮನೆಯವರಿಗೆ ಗೊತ್ತಾದರೆ ಏನು? ಹಿಂದೆ ಒಮ್ಮೆ ಕೇಸಾದಾಗ ನಾನು ಎಲ್ಲವೂ ಸರಿ ಮಾಡಿದ್ದೆ. ಆ ಮೇಲೆ ನೀವು ಸರಿಯಾಗಬೇಕಾಗಿತ್ತಲ್ಲ? ಅವನೊಬ್ಬನೇ ಬಂದದ್ದಾ? ಬೇರೆ ಯಾರಾದರು ಇದ್ರಾ? ಅಥವಾ ನೀನು ಒಬ್ಬಳೇ ಕೊಂದೆಯಾ?
ಪ್ರತಿಮಾ- ಒಬ್ಬನೇ ಬಂದದ್ದು.
ಸಂದೀಪ್- ನಿನಗೆ ಶಿಕ್ಷೆಯಾಗಬೇಕು. ಬಾವನಿಗೆ ಮೋಕ್ಷ ಸಿಗಬೇಕು. ಅವನ ಬಳಿ ದುಡ್ಡಿದೆ ಎಂದು ನೀನು ಹೋದದ್ದಲ್ವಾ? ನಿನಗೆ ಶಿಕ್ಷೆ ಆಗಬೇಕು. ಪೊಲೀಸನ್ನು ಕರೆಸಬೇಕಾ? ಬೇರೆ ಮೊಬೈಲ್ ಇದೆಯಾ? ನೀನು ಮಕ್ಕಳನ್ನೂ ಕೊಲ್ಲುತ್ತಿದ್ದೆ, ಅವರನ್ನು ಕರೆದುಕೊಂಡು ಹೋದದ್ದಕ್ಕೆ ಅವರು ಬಚಾವ್ ಆದರು. ಹಣದ ಹಿಂದೆ ಹೋದೆ.
ಪ್ರತಿಮಾ- ನಾನು ಡಿಸೈಡ್ ಮಾಡಿದ್ದೇನೆ ನಾನು ಸಾಯುತ್ತೇನೆ.
ಸಂದೀಪ್- ನಾನು ಮರ್ಯಾದೆ ಮರ್ಯಾದೆ ಅಂತ ಸೊರಗಿ ಹೋದೆ. ನಾನು ಮೂರು ತಿಂಗಳಿಂದ ಅನುಭವಿಸಿದ್ದೇನೆ. (ಆಡಿಯೋ ವರದಿ: ಟಿವಿ 9 ಮಾಧ್ಯಮದಿಂದ)