C P Yogishwar: ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ?
C P Yogishwar: ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ಚೆನ್ನಪಟ್ಟನ ಕ್ಷೇತ್ರದ್ದೇ ಹೆಚ್ಚು. ಚನ್ನಪಟ್ಟಣ ಬೈಎಲೆಕ್ಷನ್ ವಿಚಾರವಾಗಿ ಈಗ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್(C P Yogishwar )ಬಂಡಾಯವೆದ್ದಿದ್ದಾರೆ. ನಿನ್ನೆ ದಿನ ಬಿಜೆಪಿಯ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಚನ್ನಪಟ್ಟಣದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವ ಇಂಗಿತ ಹೊರಹಾಕಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಹೌದು, ಬಿಜೆಪಿಯ(BJP) ನಾಮ ನಿರ್ದೇಶನರಾಗಿ ವಿಧಾನ ಪರಿಷತ್(Vidhanaparishath) ಸದಸ್ಯರಾಗಿದ್ದ ಸಿಪಿ ಯೋಗೇಶ್ವರ್ ರಾಜೀನಾಮೆ ಸಲ್ಲಿಸುವ ಮೂಲಲ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿ ಕರೆದು ‘ನಾನು ಯಾವುದೇ ಪಕ್ಷಕ್ಕೆ ಹೋಗಿಲ್ಲ. ಯಾರನ್ನೂ ಸಂಪರ್ಕಿಸಿಲ್ಲ. ಈಗಲೂ ನಾನು ಜೆಡಿಎಸ್ ಗೆ ಕೂಡ ಟಿಕೆಟ್ ನೀಡಲು ಕೇಳಿದ್ದೇನೆ. ಮುಂದೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಕೇಳಿಲ್ಲ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ. ನನ್ನ ಕೆಲಸ ಗುರುತಿಸಿ ಯಾರೂ ಟಿಕೆಟ್ ಕೊಟ್ಟರೂ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಈ ಚುನಾವಣೆಯಲ್ಲಿ ಎನ್‌ಡಿಎ(NDA) ಅಭ್ಯರ್ಥಿ ಆಗಬೇಕು ಅನ್ನೋ ಆಸೆಯಿದೆ. ಅದಕ್ಕೆ ಇನ್ನೂ ಅವಕಾಶ ಕೂಡ ಇದೆ. ಬಿಜೆಪಿ ಹೈಕಮಾಂಡ್ ಒಂದು ಅವಕಾಶ ಕೊಡಬೇಕಷ್ಟೇ. ನಮ್ಮ ಪಕ್ಷದ ನಾಯಕರು ನನ್ನೊಂದಿಗೆ ಇದ್ದಾರೆ. ಆದರೆ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಈ ಕಾರಣದಿಂದಲೇ ನಾನು ಈ ನಿರ್ಧಾರ ತೆಗೆದುಕೊಂಡೆ. ಹಾಗಾಗಿ ಬೈಎಲೆಕ್ಷನ್‌ನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗಿದೆ. ಯೋಗೇಶ್ವರ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.