Gujarath: ಕಣ್ಣು ಆಪರೇಷನ್ ಗೆಂದು ಆಸ್ಪತ್ರೆ ಸೇರಿದ್ದ 350 ಮಂದಿ ರೋಗಿಗಳು – ಆಪರೇಷನ್ ಆಗಿ ಕಣ್ಣು ತೆರೆದಾಗ ಎಲ್ಲರೂ ಬಿಜೆಪಿ ಸದಸ್ಯರಾಗಿದ್ರು !!

Gujarath: ಕಣ್ಣಿನ ಶಸ್ತ್ರಚಿಕಿತ್ಸೆಗೆಂದು ಸುಮಾರ 350 ಮಂದಿ ರೋಗಿಗಳು ಆಸ್ಪತ್ರೆಯೊಂದಕ್ಕೆ ಬಂದು ಅಡ್ಮಿಟ್ ಆಗಿದ್ದಾರೆ. ಆಪರೇಷನ್ ಕೂಡ ಆಗಿದೆ. ಆದರೆ ಕಣ್ಣುಬಿಟ್ಟಾಗ ಅವರೆಲ್ಲರೂ ಬಿಜೆಪಿ ಸದಸ್ಯರಾಗಿಬಿಟ್ಟಿದ್ದರು !! ಯಸ್, ಆಪರೇಷನ್ ಆಗೋದರೊಳಗೆ ಅಷ್ಟೂ ರೋಗಿಗಳನ್ನು ಅವರ ಒಪ್ಪಿಗೆಯಿಲ್ಲದೆ ಬಿಜೆಪಿಗೆ(BJP) ಸೇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಪ್ರಧಾನಿ ಮೋದಿ ತವರಾಗಿರುವ ಗುಜರಾತ್(Gujarath) ನಲ್ಲಿ ವಿಚಿತ್ರ ಬೆಳವಣಿಗೆ ನಡೆದಿದೆ. ಅಹಮದಾಬಾದ್ ನ ರಾಜ್ಕೋಟ್ ನ ಆಸ್ಪತ್ರೆಯೊಂದರಲ್ಲಿ ಈ ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಅದೂ ಕೂಡ ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜುನಾಗಡ್ ನ ಕಮಲೇಶ್ ತುಮ್ಮರ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.

ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ರಾಂಚೋಡ್ ದಾಸ್ ಟ್ರಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ ಹಾಗೂ ಅನುಮತಿ ಇಲ್ಲದೆ ಬಿಜೆಪಿ ಸದಸ್ಯರಾಗಿರುವ ಕಮಲೇಶ್ ಎಂಬುವರರು ಈ ಕುರಿತು ಮಾತನಾಡಿ, ತಡರಾತ್ರಿ ವ್ಯಕ್ತಿಯೋರ್ವರು ಬಂದು ನಮ್ಮ ಮೊಬೈಲ್ ಸಂಖ್ಯೆ ಮತ್ತು ಒಟಿಪಿಗಳನ್ನು ಕೇಳಿದ್ದಾರೆ. ನಾನು ನನ್ನ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿದ್ದೇನೆ. ಸ್ವಲ್ಪ ಸಮಯದ ನಂತರ, ನೀವು ಬಿಜೆಪಿ ಸದಸ್ಯರಾಗಿದ್ದಿರಿ ಎಂಬ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.

ಇನ್ನು ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ರಾಂಚೋಡ್ ದಾಸ್ ಆಸ್ಪತ್ರೆಯ ಅಧಿಕಾರಿ ಶಾಂತಿ ಬಡೋಲಿಯಾ, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ಗುಜರಾತ್ ಬಿಜೆಪಿ ಉಪಾಧ್ಯಕ್ಷ ಗೋರ್ಧನ್ ಜಡಾಫಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ರೀತಿ ಬಿಜೆಪಿಗೆ ಜನರನ್ನು ಸೇರಿಸಿಕೊಳ್ಳಲು ನಾವು ಯಾರಿಗೂ ಸೂಚನೆ ನೀಡಿಲ್ಲ, ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Leave A Reply

Your email address will not be published.