Belagavi: ‘ಗೃಹಲಕ್ಷ್ಮಿ’ ಹಣ ಕೂಡಿಟ್ಟು ವಿದ್ಯಾರ್ಥಿಗಳಿಗಾಗಿ ಬೃಹತ್ ಗ್ರಂಥಾಲಯ ಕಟ್ಟಿದ ಮಹಿಳೆ

Belagavi: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Governament) ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ (Gruha Lakshmi Scheme) ಲಕ್ಷಾಂತರ ಬಡವರು ಪ್ರಯೋಜನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದಾಗಿ ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಬಡಿಸುವ ಮೂಲಕ ರಾಜ್ಯದ ಗಮನಸೆಳೆದಿದ್ದರು. ಈ ಮಹಿಳೆಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಅಭಿನಂದನೆ ಸಲ್ಲಿಸಿದ್ದರು. ಈ ಬೆನ್ನಲ್ಲೇ ಮತ್ತೋರ್ವ ಮಹಿಳೆ ಮತ್ತೊಂದು ಸಾಧನೆ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ.

ಹೌದು, ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನ ಹಾಕಲಾಗುತ್ತಿದೆ. ಈ ಹಣದಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಎಂಬುವವರು ಗ್ರಂಥಾಲಯ ತೆರೆದಿದ್ದಾರೆ. ಆ ಮೂಲಕ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಅವರು ಗ್ರಾಮ ಪಂಚಾಯತ ಸದಸ್ಯರಾಗಿದ್ದು ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ತಮ್ಮ ಹದಿಮೂರು ಕಂತಿನ ಗೃಹಲಕ್ಷ್ಮೀ ಹಣ ಹಾಗೂ ಪಂಚಾಯ್ತಿ ಸದಸ್ಯತ್ವದ ಗೌರವಧನವನ್ನು ಸೇರಿಸಿ ಮಕ್ಕಳ ಸಹಕಾರದಿಂದ ಒಂದು ಲಕ್ಷ ಐವತ್ತು ಸಾವಿರ ರೂ ಖರ್ಚು ಮಾಡಿ ಸಣ್ಣ ಪ್ರಮಾಣದ ಗ್ರಂಥಾಲಯವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.

ಅಂದಹಾಗೆ ಗ್ರಂಥಾಲಯಕ್ಕೆ ಒಟ್ಟು ಒಂದೂವರೆ ಲಕ್ಷ ಖರ್ಚು ಮಾಡಲಾಗಿದೆ. ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು.ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡ್ತಿದ್ದವು. ಅಲ್ಲಿ ಲೈಬ್ರರಿಯಲ್ಲಿ ಕುಳಿತು ಅವರು ಓದುತ್ತಾರೆ. ಇಂಥವರಿಗಾಗಿ ನಮ್ಮಲ್ಲಿಯೇ ಒಂದು ಲೈಬ್ರೆರಿ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಹದಿಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ.ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದಾರೆ.