Ratan Naval Tata: ಜನಪ್ರಿಯ ಟಾಟಾ ಇಂಡಿಕಾದಿಂದ ಟಾಟಾ ನ್ಯಾನೋ ತನಕ ಎಲ್ಲವೂ ರತನ್ ಟಾಟಾ ಉತ್ಪನ್ನಗಳು !
Ratan Naval Tata: ರತನ್ ಟಾಟಾ ಅವರು ಈ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಗೌರವಾನ್ವಿತ ಗೌರವ ಅಧ್ಯಕ್ಷ ರತನ್ ಟಾಟಾ ಅವರು ಬುಧವಾರ ರಾತ್ರಿ 86 ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮವಾರವಷ್ಟೇ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ಆರೋಗ್ಯದ ಸುತ್ತಲಿನ ಊಹಾಪೋಹಗಳನ್ನು ತಳ್ಳಿಹಾಕಿದ್ದರು ಮತ್ತು ವಯಸ್ಸಿನ ಕಾರಣದಿಂದಾಗಿ ಅವರು ರೋಟೀನ್ ವೈದ್ಯಕೀಯ ತನಿಖೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು.
1991 ರಿಂದ 2012 ರವರೆಗೆ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ ವ್ಯಕ್ತಿಯಾಗಿದ್ದರು ರತನ್ ಟಾಟಾ. ಈ ಸಂದರ್ಭದಲ್ಲಿ ಟಾಟಾ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ವಿಸ್ತರಿಸಿದರು. ಕೇವಲ ಅತ್ಯುನ್ನತ ವ್ಯಾಪಾರ ಸಾಧನೆಗಳಲ್ಲಿ ಮಾತ್ರವಲ್ಲ “ಭಾರತ ಮತ್ತು ಭಾರತೀಯರನ್ನು ಮೊದಲು” ಎನ್ನುವ ನೀತಿಯನ್ನು ಅವರು ತಮ್ಮ ವ್ಯಾಪಾರದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದರು.
ಡಿಸೆಂಬರ್ 28, 1937 ರಂದು ಮುಂಬೈನಲ್ಲಿ ಜನಿಸಿದ ರತನ್ ಟಾಟಾ ಅವರು ಪ್ರತಿಷ್ಠಿತ ಪಾರ್ಸಿ ಕುಟುಂಬದಿಂದ ಬಂದವರು. ಮುಂಬೈಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು ಅವರ ಮೂಲ ಕುಟುಂಬ ಬಂದಿರುವುದು ಗುಜರಾತಿನಿಂದ. ಅವರ ತಾತ ಜಂಶೆಡ್ಡಿ ಟಾಟಾ ಭಾರತದ ಕೈಗಾರಿಕೋದ್ಯಮದ ಪಿತಾಮಹ. ಅಂತಹ ಕುಟುಂಬದಲ್ಲಿ ಮೂರನೆಯ ತಲೆಮಾರಿನವರಾಗಿ ಹುಟ್ಟಿ ಬೆಳೆದ ರತನ್ ಟಾಟಾರವರು 1962 ರಲ್ಲಿ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದರು.
ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದ ಅವರು ಸ್ವಲ್ಪ ಸಮಯದ ನಂತರ ಟಾಟಾ ಕುಟುಂಬ ವ್ಯವಹಾರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮತ್ತು ಶೀಘ್ರವಾಗಿ 1991ರಲ್ಲಿ ಅತ್ಯಂತ ಸವಾಲಿನ ಅವಧಿಯಲ್ಲಿ ಟಾಟಾ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ಕೇವಲ 5.8 ಶತಕೋಟಿ ಡಾಲರ್ ಆದಾಯವನ್ನು ಹೊಂದಿದ್ದ ಗುಂಪಿಗೆ ಸವಾಲಿನ ಅವಧಿಯಲ್ಲಿ ಅವರ ಉಸ್ತುವಾರಿಯಲ್ಲಿ, ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು ಮತ್ತು ಹೊಸ ಹೊಸ ಬ್ಯುಸಿನೆಸ್ ವೆಂಚರ್ ಳನ್ನು ಶುರು ಮಾಡಿತು. ಆ ಮೂಲಕ ಟಾಟಾ ಸಂಸ್ಥೆಗಳ ಆದಾಯವು 2011-12 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್ ಏರಿತು.
ಜನಪ್ರಿಯ ‘ಟಾಟಾ ಇಂಡಿಕಾ’ ರತನ್ ಟಾಟಾ ಉತ್ಪನ್ನ!
ಟಾಟಾ ಇಂಡಿಕಾವನ್ನು 1998 ರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿತು, ಮತ್ತು ಅದು ಡೀಸೆಲ್ ಎಂಜಿನ್ ಹೊಂದಿರುವ ಮೊದಲ ಭಾರತೀಯ ಹ್ಯಾಚ್‌ಬ್ಯಾಕ್ ಕಾರ್ ಆಗಿತ್ತು. ಆ ಕಾರು ತನ್ನ ಕಡಿಮೆ ಬೆಲೆ ಮತ್ತು ಅತ್ಯಧಿಕ ಮೈಲೇಜ್ ಗೋಸ್ಕರ ದೇಶ ವ್ಯಾಪ್ತಿಯಾಗಿ ಭರ್ಜರಿ ಮಾರಾಟ ಕಂಡಿತು. ಇದು ಟಾಟಾ ಮೋಟಾರ್ಸ್‌ನ ಮೊದಲ ಪ್ರಯಾಣಿಕ ಹ್ಯಾಚ್‌ಬ್ಯಾಕ್. ಟಾಟಾ ಇಂಡಿಕಾದ ಅಭೂತಪೂರ್ವ ಯಶಸ್ಸಿನ ನಂತರ ಇದೇ ಮಾದರಿಯ ಹಲವು ಕಾರುಗಳನ್ನು 2004 ರ ಅಂತ್ಯದಿಂದ ಯುರೋಪಿಯನ್ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲಾಯಿತು. ಸರಿಸುಮಾರು 20 ವರ್ಷಗಳ ಕಾಲ ಜನಪ್ರಿಯ ಇಂಡಿಕಾ ಭಾರತದ ರಿಟೇಲ್ ಕಾರು ಮಾರುಕಟ್ಟೆಯಲ್ಲಿ ಕಾರುಬಾರು ಮಾಡಿತ್ತು. ಇತ್ತೀಚೆಗೆ ಐದು ವರ್ಷಗಳ ಹಿಂದೆ ಕಾರನ್ನು ಏಪ್ರಿಲ್ 2018 ರಲ್ಲಿ ನಿಲ್ಲಿಸಲಾಯಿತು.
ಟಾಟಾ ನ್ಯಾನೋ ಎಂಬ 1 ಲಕ್ಷದ ಕಾರು
ಬಹುಶಃ 2008 ರಲ್ಲಿ ಬಿಡುಗಡೆಯಾದ ಟಾಟಾ ನ್ಯಾನೋಗಿಂತ ರತನ್ ಟಾಟಾ ಅವರ ಭಾರತದ ಬದ್ಧತೆಯನ್ನು ಸೂಚಿಸುವ ಯಾವುದೇ ಯೋಜನೆ ಮತ್ತೊಂದು ಸುಲಭವಾಗಿ ಸಿಗಲಿಕ್ಕಿಲ್ಲ.
ಭಾರತೀಯ ಮಧ್ಯಮ ವರ್ಗದವರಿಗೆ ಕೈಗೆಟುಕುವ 1 ಲಕ್ಷ ರೂಪಾಯಿ ಬೆಲೆಯ ವಿಶ್ವದ ಅತ್ಯಂತ ಅಗ್ಗದ ಕಾರನ್ನು ರಚಿಸುವುದು ಅವರ ಉದ್ದೇಶವಾಗಿತ್ತು. ಅವರ ಉದ್ದೇಶವನ್ನು ಅವರು ಯಶಸ್ವಿಯಾಗಿ ಪೂರೈಸಿದರು. ಒಂದು ಲಕ್ಷದ, ವಿಶ್ವದ ಕಾರನ್ನು ಅವರು ವಿಶ್ವಕ್ಕೆ ಪರಿಚಯಿಸಿದರು.
ಅವರ ಅಧಿಕಾರಾವಧಿಯ ಉದ್ದಕ್ಕೂ, ರತನ್ ಟಾಟಾ ಅವರು ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಕೋರಸ್ ಸ್ಟೀಲ್ ಸೇರಿದಂತೆ ಅಂತರಾಷ್ಟ್ರೀಯ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಕ್ಕು, ಆಟೋಮೊಬೈಲ್ಗಳು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಮುಖ ಕೈಗಾರಿಕೋದ್ಯಮಿ ಯಾಗಿ ಅವರು ಹೊರಹೊಮ್ಮಿ ಅವರು ಟಾಟಾ ಗ್ರೂಪ್ ಅನ್ನು ಬೆಳೆಸಿದರು. ರತನ್ ಟಾಟಾ ಅವರು ಡಿಸೆಂಬರ್ 2012 ರಲ್ಲಿ ನಿವೃತ್ತರಾದರು. ಆಗ ಟಾಟಾ ಸನ್ಸ್ ಅವರಿಗೆ ಚೇರ್ಮನ್ ಎಮೆರಿಟಸ್ ಎಂಬ ಗೌರವ ಪ್ರಶಸ್ತಿಯನ್ನು ನೀಡಿತು.
ವ್ಯಾಪಾರದ ಹೊರತಾಗಿ, ರತನ್ ಟಾಟಾ ಅವರು ಲೋಕೋಪಕಾರಕ್ಕೂ ಬದ್ಧರಾಗಿದ್ದರು, ಇದು ಭಾರತದಲ್ಲಿ ಸಮುದಾಯ ಅಭಿವೃದ್ಧಿ ಮತ್ತು ಸಾಮಾಜಿಕ ಉಪಕ್ರಮಗಳ ಮೇಲೆ ಕೇಂದ್ರೀಕರಿಸುವ ಟಾಟಾ ಟ್ರಸ್ಟ್‌ಗಳ ನಾಯಕತ್ವದಲ್ಲಿ ಮುಂಚೂಣಿಯಲ್ಲಿತ್ತು, ಈಗಲೂ ಇದೆ. ಅವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಸುಧಾರಿಸಲು ಸಮರ್ಪಿತರಾಗಿದ್ದರು, ಲೆಕ್ಕವಿಲ್ಲದಷ್ಟು ಜನರ ಮೇಲೆ ಅವರು ಶಾಶ್ವತವಾದ ಪ್ರಭಾವವನ್ನು ಬೀರಿದರು.
ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಪದ್ಮವಿಭೂಷಣ, ಮತ್ತು ಬ್ರಿಟಿಷ್ ಸಾಮ್ರಾಜ್ಯದ ನೈಟ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳೊಂದಿಗೆ ಗೌರವಿಸಲ್ಪಟ್ಟ ರತನ್ ಟಾಟಾ ಅವರು ತಮ್ಮ ಕೆಲಸದ ಶ್ರದ್ಧೆ ಮತ್ತು ಸಮಗ್ರತೆಗಾಗಿ ಹೆಸರುವಾಸಿ. ಅವರ ಈ ಸಾವು ಸಮಸ್ತ ಭಾರತೀಯರನ್ನು ಚಂಚಲಗೊಳಿಸಿದೆ.