Hariyana: ಹರಿಯಾಣದಲ್ಲಿ BJPಗೆ ಭರ್ಜರಿ ಗೆಲವು – ಜಿಲೇಬಿ ಕಳಿಸಿ ರಾಹುಲ್ ಗಾಂಧಿಯನ್ನು ಅಣಕಿಸಿದ ಕಮಲ ಪಡೆ, ವಿಷ್ಯ ಏನು?

Hariyana: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ. ಫಲಿತಾಂಶದ ದಿನವೇ ಎಕ್ಸಿಟ್ ಪೋಲ್ ಫಲಿತಾಂಶಗಳು ತಲೆಕೆಳಗಾಗಿವೆ. ಬಿಜೆಪಿ ಸತತವಾಗಿ ಮೂರನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ ಬಿಜೆಪಿ ನಾಯಕರು ಜನರಿಗೆ 1 ಟನ್ ಜಿಲೇಬಿ ಹಂಚುವ ಮೂಲಕ ರಾಹುಲ್ ಗಾಂಧಿ ಅವರನ್ನು ಅಣಕಿಸಿದೆ. ಇದಕ್ಕೆ ಕಾರಣವೂ ಇದೆ.

ಹರಿಯಾಣ ಚುನಾವಣಾ ಫಲಿತಾಂಶ (Haryana Election Results) ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ (Jalebi) ಫುಲ್‌ ಟ್ರೆಂಡಿಂಗ್‌ನಲ್ಲಿದೆ. ಹರಿಯಾಣ ರಾಜಕೀಯದಲ್ಲಿ ಜಿಲೇಬಿ ಚರ್ಚೆ ತೀವ್ರಗೊಂಡಿದೆ. ಜಿಲೇಬಿ ಫುಲ್‌ ಟ್ರೆಂಡಿಗ್‌ (Trending) ಆಗಲು ಕಾರಣವಿದೆ. ಹರಿಯಾಣ ಚುನಾವಣೆಯ ಪ್ರಚಾರ ಭಾಷಣದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul gandhi) ಜಿಲೇಬಿ ಪ್ರಸ್ತಾಪ ಮಾಡಿ ಮಾತನಾಡಿದ್ದರು

ಹೌದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಗೊಹಾನದ ಪ್ರಸಿದ್ಧ ಜಿಲೇಬಿಗಳನ್ನು ತಿಂದು ವೇದಿಕೆ ಮೇಲೆ ರಾಹುಲ್ ಗಾಂಧಿ ಜಿಲೇಬಿ ಕಾರ್ಖಾನೆಗಳ ಸ್ಥಾಪನೆ, ಉದ್ಯೋಗಾವಕಾಶ ಕಲ್ಪಿಸಿ ದೇಶ ವಿದೇಶಗಳಿಗೆ ರಫ್ತು ಮಾಡುವ ಕುರಿತು ಮಾತನಾಡಿದರು. ಬಿಜೆಪಿ ಇದನ್ನೇ ವಿಷಯವನ್ನಾಗಿ ಮಾಡಿಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಇಷ್ಟೇ ಅಲ್ಲದೆ ‘ಮಾತುರಾಮ್‌ ಜಂಬೋ ಜಿಲೇಬಿ’ ವಿಚಾರವಿಟ್ಟು ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಲು ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿನ ಸಿಹಿಯಾಗಿ ಅದೇ ಜಿಲೇಬಿಗಳನ್ನು ಕಾಂಗ್ರೆಸ್‌ ಕಚೇರಿಗೆ ತಲುಪಿಸಿದ್ದಾರೆ.

ರಾಹುಲ್‌ ಹೇಳಿದ್ದೇನು?
ಹರಿಯಾಣದ ಜಿಲೇಬಿ ತುಂಬಾ ರುಚಿಕರವಾಗಿದ್ದು, ಅದನ್ನು ವಿಶ್ವಾದ್ಯಂತ ರಫ್ತು ಮಾಡಬೇಕು. ಸ್ಥಳೀಯ ಅಂಗಡಿಗಳನ್ನು ಜಿಲೇಬಿ ಕಾರ್ಖಾನೆಗಳಾಗಿ ಬದಲಾಗಬೇಕು. ಈ ಜಿಲೇಬಿಗಳು ದೇಶ ಮತ್ತು ವಿದೇಶಕ್ಕೆ ಹೋದರೆ 10,000 ರಿಂದ 50,000 ಮಂದಿಗೆ ಉದ್ಯೋಗ ಸಿಗಲಿದೆ. ನಾನು ಹರಿಯಾಣದ ಜಿಲೇಬಿಯನ್ನು ತಿಂದಿದ್ದೇನೆ. ಇದು ತುಂಬಾ ರುಚಿಕರವಾಗಿದೆ. ಈ ಜಿಲೇಬಿಗಳನ್ನು ಜಪಾನ್ ಮತ್ತು ಅಮೆರಿಕದಂತಹ ವಿವಿಧ ದೇಶಗಳಿಗೆ ರಫ್ತು ಮಾಡಬೇಕು. ಆದರೆ ಮೋದಿ ಅವರು ಅದಾನಿ ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದರಿಂದ ಜಿಲೇಬಿ ಅಂಗಡಿ ತೆರೆಯಲು ನಿಮಗೆ ಸಾಲ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಈಗ ಟ್ರೆಂಡ್‌ ಯಾಕೆ?
ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಲಿದೆ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಜಿಲೇಬಿ ತಯಾರಿಸಲು ಆರ್ಡರ್‌ ನೀಡಿದ್ದರು. ಬೆಳಗ್ಗೆ 10.30ರ ಹೊತ್ತಿನವರೆಗೂ ಕಾಂಗ್ರೆಸ್ ಮುನ್ನಡೆಯಲ್ಲಿತ್ತು. ಹಾಗಾಗಿ, ಕಾಂಗ್ರೆಸ್ ಕಾರ್ಯಕರ್ತರ ಖುಷಿಗೆ ಪಾರವೇ ಇರಲಿಲ್ಲ. ಇನ್ನೇನು ಹರ್ಯಾಣದಲ್ಲಿ ಹತ್ತು ವರ್ಷಗಳ ನಂತರ ನಮ್ಮದೇ ಸರ್ಕಾರವೆಂದು, ಪಟಾಕಿ ಹಚ್ಚಿ ಕುಣಿದಾಡಲು ಆರಂಭಿಸಿದರು.

ಕಾಂಗ್ರೆಸ್ ಸ್ಥಳೀಯ ಮುಖಂಡರು ಜಿಲ್ಲಾ ಕೇಂದ್ರಗಳಲ್ಲಿ ಜಿಲೇಬಿ ಹಂಚಿ ಸಂಭ್ರಮಿಸಲು ಆರಂಭಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಜನಜಂಗುಳಿ, ಬಂದು ಹೋಗುವವರಿಗೆಲ್ಲಾ ಜಿಲೇಬಿ ಹಂಚಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಇವರ ಸಂತೋಷ ಹೆಚ್ಚು ಹೊತ್ತು ಇರಲಿಲ್ಲ. ಹನ್ನೊಂದು ಗಂಟೆ ಸುಮಾರಿಗೆ ಹರ್ಯಾಣದ ಚಿತ್ರಣವೇ ಬದಲಾಗುತ್ತಾ ಸಾಗಿತು. 25 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಮುನ್ನುಗ್ಗಲು ಆರಂಭಿಸಿತು. ಒಂದೊಂದು ರೌಂಡಿನ ಮತಎಣಿಕೆ ಮುಗಿಯುತ್ತಿದ್ದಂತೆಯೇ, ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ದಾಟೇ ಬಿಟ್ಟಿತು.

ಪಟಾಕಿ ಹಚ್ಚಿ, ಜಿಲೇಬಿ ಹಂಚಿ ಸಂಭ್ರಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪೇಚು ಮೋರೆ ಹಾಕಿಕೊಂಡು, ಕಾಂಗ್ರೆಸ್ ಕಚೇರಿಯಿಂದ ಹೊರಹೋಗಲು ಆರಂಭಿಸಿದರು. ಆದರೆ, ಗೆಲುವಿಗೆ ಮುನ್ನವೇ ಸಿಹಿ ಹಂಚಿದ್ದರಿಂದ, ಅಷ್ಟೊತ್ತಿಗೆ ಜಿಲೇಬಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡಿಂಗ್ ನಲ್ಲಿ ಹೋಯಿತು. ಹರ್ಯಾಣದ ಗೆಲುವು ಬಿಜೆಪಿಗೆ ಜಿಲೇಬಿಯಷ್ಟೇ ಸ್ವಾದಿಷ್ಟವಾಗಿತ್ತು. ಹರ್ಯಾಣದ ರೋಹ್ಟಕ್ ನಲ್ಲಿ ನಡೆದ ಇನ್ನೊಂದು ಹಾಸ್ಯಮಯ ವಿದ್ಯಮಾನವೊಂದರಲ್ಲಿ, ಕಾಂಗ್ರೆಸ್ಸಿಗೆ ಸಿಕ್ಕ ಆರಂಭಿಕ ಮುನ್ನಡೆಯನ್ನು ಆಧರಿಸಿ, ಕುದುರೆ ಮತ್ತು ರಥವನ್ನು ಮೆರವಣಿಗೆಗಾಗಿ ಕಾಂಗ್ರೆಸ್ ಮುಖಂಡರು ತರಿಸಿದ್ದರು. ಯಾವಾಗ, ಪಕ್ಷಕ್ಕೆ ಹಿನ್ನಡೆ ಆಯಿತೋ, ಅದನ್ನು ವಾಪಸ್ ಕಳುಹಿಸಿದ್ದಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಲ್ಲದೆ ರಾಹುಲ್ ಹೇಳಿಕೆಗಳನ್ನು ಗೇಲಿ ಮಾಡಿದ ಬಿಜೆಪಿ, ಅವರಿಗೆ ಸಿಹಿ ಖಾದ್ಯವನ್ನು ಹೇಗೆ ತಯಾರಿಸುತ್ತಾರೆ ಎಂಬುದರ ಬಗ್ಗೆ ಸುಳಿವು ಇಲ್ಲ ಎಂದಿದೆ. ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್, “ನನಗೂ ಗೋಹಾನಾ ಜಿಲೇಬಿ ಇಷ್ಟ. ಈಗ ರಾಹುಲ್ ಗಾಂಧಿ ಅಮೇರಿಕಾದಲ್ಲಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಜಿಲೇಬಿಯನ್ನು ಹೇಗೆ ತಯಾರಿಸುತ್ತಾರೆ ಮತ್ತು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರಿಗೆ ಭಾಷಣ ಬರೆದುಕೊಟ್ಟವರು ಅದರ ಬಗ್ಗೆ ಚೆನ್ನಾಗಿ ನಿರೂಪಿಸಿದ್ದರೆ ಚೆನ್ನಾಗಿತ್ತು. ರಾಹುಲ್ ಗಾಂಧಿ ಹೋಮ್ ವರ್ಕ್ ಚೆನ್ನಾಗಿ ಮಾಡಲ್ಲ ಎಂದು ಹೇಳಿ ಕಾಲೆಳೆದಿದ್ದಾರೆ.

ಜೊತೆಗೆ ಕಾಂಗ್ರೆಸ್ ನಾಯಕರೇ ನಿಮಗಿದು ಜಿಲೇಬಿ, ಇದು ಫ್ಯಾಕ್ಟರಿಯಲ್ಲಿ ಮಾಡಿದ ಜಿಲೇಬಿಯಲ್ಲ. ಕೆಲವೊಂದು ವಿಚಾರವನ್ನಾದರೂ ಸೀರಿಯಸ್ಸಾಗಿ ತೆಗೆದುಕೊಳ್ಳಿ, ಬಹಳ ಆತುರರಾಗಿ ಜಿಲೇಬಿ ಹಂಚಿ, ಈಗ ಚುನಾವಣಾ ಆಯೋಗದ ಮೇಲೆ ಗೂಬೆಯನ್ನು ಕೂರಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಜವಾನ್, ಕಿಶಾನ್, ಪೈಲ್ವಾನ್, ನೌಜವಾನ್ ಪರ ಮೋದಿ ಸರ್ಕಾರ ಕೆಲಸ ಮಾಡಿದೆ” ಎಂದು ಬಿಜೆಪಿ ವಕ್ತಾರ ಶೆಜಾದ್ ಪೂನಾವಾಲ ಅಣಕವಾಡಿದ್ದಾರೆ. ಈ ಬೆನ್ನಲ್ಲೇ ಜಿಲೇಬಿ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ.

ಇನ್ನು ಅಚ್ಚರಿ ಸಂಗತಿ ಏನೆಂದರೆ, ತಿಂಗಳುಗಳ ಹಿಂದೆ ಅಂದರೆ, ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಗೋಹನಾ ಜಿಲೇಬಿ ಪ್ರಸ್ತಾಪವಾಗಿತ್ತು. ಇಂಡಿಯಾ ಒಕ್ಕೂಟದ ಮೇಲೆ ದಾಳಿ ಮಾಡಿದ್ದ ಪ್ರಧಾನಿ ಮೋದಿ, ತಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನ ಮಂತ್ರಿಗಳನ್ನು ಹೊಂದುವ ಸೂತ್ರವನ್ನು ಇಂಡಿಯಾ ಒಕ್ಕೂಟ ಹೊಂದಿದೆ. ಪ್ರಧಾನಿ ಹುದ್ದೆಯೆಂದರೆ ನಮ್ಮ ಮಾಥುರಾಮ್ ಅವರ ಜಲೇಬಿಯೇ ಎಂದು ಅವರನ್ನು ಕೇಳಿ ಎಂದು ಜನರನ್ನು ಉದ್ದೇಶಿಸಿ ಮೋದಿ ಹೇಳಿದ್ದರು.

Leave A Reply

Your email address will not be published.